ರಾಷ್ಟ್ರೀಯ

JNUನಲ್ಲಿ “ಸ್ವಾಮಿ”ಯ ಅಯೋಧ್ಯೆ ಕುರಿತ ವಿಚಾರಸಂಕಿರಣ ರದ್ದು!

Pinterest LinkedIn Tumblr


ನವದೆಹಲಿ:ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಇಂದಿಗೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಜವಾಹರಲಾಲ್ ನೆಹರು ಯೂನಿರ್ವಸಿಟಿಯ ಕೊಯ್ನಾ ಹಾಸ್ಟೆಲ್ ಆವರಣದಲ್ಲಿ ‘ಅಯೋಧ್ಯೆಯಲ್ಲಿ ರಾಮಮಂದಿರವನ್ನು ಯಾಕೆ ನಿರ್ಮಾಣ ಮಾಡಬೇಕು ಎಂಬ” ವಿಚಾರಗೋಷ್ಠಿಯನ್ನು ವಿಶ್ವವಿದ್ಯಾಲಯ ರದ್ದುಪಡಿಸಿರುವ ಘಟನೆ ಬುಧವಾರ ನಡೆದಿದೆ.

ವಿಶ್ವವಿದ್ಯಾಲಯದಲ್ಲಿರುವ ಬಲಪಂಥೀಯ ಸಂಘಟನೆಯ ವಿದ್ಯಾರ್ಥಿ ಘಟಕವಾದ ವಿವೇಕಾನಂದ್ ವಿಚಾರ್ ಮಂಚ್ ಈ ವಿಚಾರಗೋಷ್ಠಿಯನ್ನು ಆಯೋಜಿಸಿತ್ತು, ಅಲ್ಲದೇ ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರನ್ನೂ ಆಹ್ವಾನಿಸಿದ್ದರು.

ಆದರೆ ಮೂಲಗಳ ಪ್ರಕಾರ, ಅಯೋಧ್ಯೆಯ ವಿಚಾರದಲ್ಲಿ ಯೂನಿರ್ವಸಿಟಿಯ ಕೊಯ್ನಾ ಹಾಸ್ಟೆಲ್ ನಲ್ಲಿ ಆಯೋಜಿಸಲಾಗಿದ್ದ ಗೋಷ್ಠಿಯನ್ನು ರದ್ದುಪಡಿಸಲಾಗಿದೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಅನಗತ್ಯ ವಿವಾದ ಬೇಡ ಎಂಬ ನೆಲೆಯಲ್ಲಿ ಆಡಳಿತ ಮಂಡಳಿ ಸುಬ್ರಮಣಿಯನ್ ಸ್ವಾಮಿ ಅವರ ಗೋಷ್ಠಿಯನ್ನು ರದ್ದುಪಡಿಸಿದೆ ಎಂದು ತಿಳಿಸಿದೆ.

ಏತನ್ಮಧ್ಯೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿರುವ ಹಾಗೂ ರದ್ದುಪಡಿಸಿರುವ ಪತ್ರವನ್ನು ಹಿಡಿದು ವಿದ್ಯಾರ್ಥಿಗಳು ಜೆಎನ್ ಯುನ ಪೆರಿಯಾರ್ ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಬುಧವಾರ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಎಂದು ನಿಗದಿಪಡಿಸಲಾಗಿತ್ತು.

ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ, ಇದು ಎಡಪಂಥೀಯರ ಅಸಹಿಷ್ಣುತೆ ಎಂದು ಆರೋಪಿಸಿದ್ದಾರೆ. ನನ್ನ ವಿಚಾರಧಾರೆಯಿಂದ ಯುಕವರು ಪ್ರಭಾವಿತರಾಗುತ್ತಾರೆ ಎಂದು ಜೆಎನ್ ಯು ಭಯಗೊಂಡಿದೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಯೂನಿರ್ವಸಿಟಿಯಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಸಹಿಷ್ಣುತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸ್ವಾಮಿ ಮರು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.

-ಉದಯವಾಣಿ

Comments are closed.