ರಾಷ್ಟ್ರೀಯ

ವರದಕ್ಷಿಣೆ ಕೇಳಿದ್ದಕ್ಕೆ ವರನೇ ಬೇಡ ಎಂದ ವಧು!

Pinterest LinkedIn Tumblr


ಕೋಟ: ಕಡೆಯ ಕ್ಷಣದಲ್ಲಿ ಒಂದು ಕೋಟಿ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟ ವರನನ್ನು ವಧು ಮದುವೆ ದಿನವೇ ತಿರಸ್ಕರಿಸಿದ ಘಟನೆ ಕೋಟದಲ್ಲಿ ನಡೆದಿದೆ.

ಕೋಟದ ಮೆಡಿಕಲ್‌ ಕಾಲೇಜಿನಲ್ಲಿ ಹಿರಿಯ ಪ್ರೊಫೆಸರ್‌ ಆಗಿರುವ ಅನಿಲ್‌ ಸಕ್ಸೇನಾ ಅವರ ಪುತ್ರಿಯೇ ಈ ದಿಟ್ಟ ನಿರ್ಧಾರ ತೆಗೆದುಕೊಂಡವರು. ದಂತ ವೈದ್ಯೆಯಾಗಿರುವ ಆಕೆಯ ಮದುವೆ ಡಾ. ಸಕ್ಷಮ್‌ ಮಧೋಕ್‌ ಜತೆ ಭಾನುವಾರ ಸಂಜೆಗೆ ನಿಗದಿಯಾಗಿತ್ತು. ಮಧೋಕ್‌ ಉತ್ತರ ಪ್ರದೇಶದ ಮೊರಾದಾಬಾದ್‌ನ ಮೆಡಿಕಲ್‌ ಕಾಲೇಜಿನಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌.

ನಿಶ್ಚಿತಾರ್ಥದ ಸಂದರ್ಭದಲ್ಲಿ ಹುಡುಗನಿಗೆ ಕಾರು ಮತ್ತು 10 ಗ್ರಾಂ ತೂಕದ ಐದು ಚಿನ್ನದ ನಾಣ್ಯಗಳನ್ನು ನೀಡಲಾಗಿತ್ತು. ಆದರೆ, ಭಾನುವಾರ ವರ, ಇನ್ನಷ್ಟು ಉಡುಗೊರೆ ಮತ್ತು ಒಂದು ಕೋಟಿ ರೂ. ಡಿಮ್ಯಾಂಡ್‌ ಮಾಡಿದ.

ಉಡುಗೊರೆ, ಕಾರು, ಮದುವೆ ಸಿದ್ಧತೆಗಳಿಗಾಗಿ ಆಗಲೇ 30-35 ಲಕ್ಷ ರೂ. ಖರ್ಚು ಮಾಡಿದ್ದ ಕುಟುಂಬಕ್ಕೆ ಈ ಬೇಡಿಕೆ ಆಘಾತ ಉಂಟು ಮಾಡಿತು. ಡಾ. ಸಕ್ಸೇನಾ ದಂಪತಿ ಪರಸ್ಪರ ಮಾತನಾಡಿಕೊಂಡು ಮಗಳು ಡಾ. ರಶ್ಮಿ ಜತೆ ಚರ್ಚಿಸಿದರು. ಆಕೆ ವರನ ಜತೆ ಫೋನ್‌ನಲ್ಲಿ ಮಾತನಾಡಿದರು. ಸಕ್ಷಮ್‌ ಮಧೋಕ್‌ ತನ್ನ ಬೇಡಿಕೆಯನ್ನು ಸಡಿಲಿಸಲು ಒಪ್ಪದೆ ಇದ್ದಾಗ ರಶ್ಮಿ ತನಗೆ ಅಂಥ ಗಂಡನೇ ಬೇಡ ಎಂದು ನಿರ್ಧರಿಸಿದರು.

ಮದುವೆ ರದ್ದು ಮಾಡಿದರೂ ಹುಡುಗಿ ಕಡೆಯವರು ಯಾರಿಗೂ ಅದನ್ನು ತಿಳಿಸಿರಲಿಲ್ಲ. ಬಂಧುಗಳು, ಆತ್ಮೀಯರೆಲ್ಲ ಬಂದು ಮದುವೆ ಊಟ ಮಾಡಿದ ಬಳಿಕವೇ ಮದುವೆ ರದ್ದಾಗಿರುವ ವಿಷಯ ತಿಳಿಸಿ ತಮ್ಮ ಸೌಜನ್ಯ ಮೆರೆದರು.

Comments are closed.