ರಾಷ್ಟ್ರೀಯ

ನಗದುರಹಿತ ಪ್ರಭಾವ: 358 ಎಟಿಎಂ ಬಂದ್‌

Pinterest LinkedIn Tumblr


ಹೊಸದಿಲ್ಲಿ: ನೋಟು ಅಮಾನ್ಯದಿಂದ ಜನರು ನಗದು ಬಳಕೆ ಕಡಿಮೆ ಮಾಡಿದ್ದಾರೆ ಎಂಬುದಕ್ಕೆ ಪುರಾವೆಯಾಗಿ, ಎಟಿಎಂಗಳು ಖಾಲಿ ಹೊಡೆಯುತ್ತಿವೆ. ಕಳೆದ ಜೂನ್‌-ಆಗಸ್ಟ್‌ ತ್ತೈಮಾಸಿಕದಲ್ಲಿ 358 ಎಟಿಎಂಗಳನ್ನು ಬ್ಯಾಂಕ್‌ಗಳು ಮುಚ್ಚಿವೆ. ಮೇಲ್ನೋಟಕ್ಕೆ ಈ ಸಂಖ್ಯೆ (ಶೇ. 0.16) ಅತ್ಯಂತ ಕಡಿಮೆ ಎನಿಸಿರಬಹುದು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಎಟಿಎಂ ಗಳ ಸಂಖ್ಯೆ ಶೇ. 16.4ರ ದರದಲ್ಲಿ ಏರಿಕೆ ಯಾಗುತ್ತಿತ್ತು. ಕಳೆದ ವರ್ಷ ಈ ಪ್ರಮಾಣ ಶೇ.3.6 ಆಗಿತ್ತು. ಆದರೆ ಇದೇ ಮೊದಲ ಬಾರಿಗೆ ಎಟಿಎಂಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ನೋಟು ಅಮಾನ್ಯದ ಅನಂತರದಲ್ಲಿ ಎಟಿಎಂಗಳ ಬಳಕೆ ಕಡಿಮೆಯಾಗಿರುವುದು ಮತ್ತು ಎಟಿಎಂ ನಿರ್ವಹಣಾ ವೆಚ್ಚ ಬ್ಯಾಂಕ್‌ಗಳಿಗೆ ಹೆಚ್ಚಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಅತಿದೊಡ್ಡ ಬ್ಯಾಂಕ್‌ ಹಾಗೂ ಎಟಿಎಂ ನೆಟ್‌ವರ್ಕ್‌ ಹೊಂದಿರುವ ಎಸ್‌ಬಿಐ 91 ಎಟಿಎಂಗಳನ್ನು ಈ ತ್ತೈಮಾಸಿಕದಲ್ಲಿ ಮುಚ್ಚಿದೆ. ವಿಲೀನಗೊಂಡ ಬ್ಯಾಂಕ್‌ಗಳ ಎಟಿಎಂಗಳು ಎಸ್‌ಬಿಐ ಎಟಿಎಂಗಳ ಸಮೀಪದಲ್ಲಿದ್ದುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಬಿಐ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಹಲವು ಬ್ಯಾಂಕ್‌ಗಳು ಎಟಿಎಂಗಳನ್ನು ಮುಚ್ಚಿಲ್ಲ ವಾದರೂ, ವಿಸ್ತರಣೆ ಯೋಜನೆ ಕೈಬಿಟ್ಟು, ಕಾದು ನೋಡುವ ತಂತ್ರ ಅನುಸರಿಸಿವೆ. ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ ಆಗಿರುವ ಎಚ್‌ಡಿಎಫ್ಸಿ ಬ್ಯಾಂಕ್‌ 5 ಎಟಿಎಂಗಳನ್ನು ಮುಚ್ಚಿದ್ದು, ಹೆಚ್ಚು ಜನ ಸಂದಣಿ ಇರುವ ಪ್ರದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ.

-ಉದಯವಾಣಿ

Comments are closed.