ರಾಷ್ಟ್ರೀಯ

ಬೈಕ್‍ನಲ್ಲಿ ದೇಶ ಸುತ್ತಿದ್ದ ಸನಾ ಇಕ್ಬಾಲ್ ಅಪಘಾತ ಪೂರ್ವ ನಿಯೋಜಿತ ಕೊಲೆ: ಸನಾ ತಾಯಿ

Pinterest LinkedIn Tumblr


ಹೈದರಾಬಾದ್: ಮಹಿಳಾ ಬೈಕರ್ ಎಂಬ ಖ್ಯಾತಿ ಗಳಿಸಿದ್ದ ಸನಾ ಇಕ್ಬಾಲ್ ಅಪಘಾತ ಪೂರ್ವ ನಿಯೋಜಿತ ಕೊಲೆ ಎಂದು ಸನಾ ಇಕ್ಬಾಲ್ ತಾಯಿ ದೂರಿದ್ದಾರೆ.

ಸನಾ ಇಕ್ಬಾಲ್ ಅಂತ್ಯಕ್ರಿಯೆ ನಂತರ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಸನಾ ಇಕ್ಬಾಲ್ ತಾಯಿ ಶಹೀನ್ ಖಾನ್ ಅವರು ನನ್ನ ಮಗಳು ಅಪಘಾತದಲ್ಲಿ ಮೃತಪಟ್ಟಿಲ್ಲ ಅವಳನ್ನು ಪೂರ್ವ ನಿಯೋಜಿತವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನದೀಮ್ ಜತೆ ಸನಾ ಇಕ್ಬಾಲ್ ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು. ಪತಿ ನದೀಮ್ ಹಾಗೂ ಆತನ ತಾಯಿ ಹಣಕ್ಕಾಗಿ ಸನಾಳನ್ನು ಪೀಡಿಸುತ್ತಿದ್ದರು. ಸನಾ ಇಕ್ಬಾಲ್ ನದೀಮ್ ಜತೆ ಕೇವಲ ಮೂರರಿಂದ ನಾಲ್ಕು ತಿಂಗಳು ಮಾತ್ರ ಸಂಸಾರ ಮಾಡಿದ್ದಳು. ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದೇವು ಎಂದು ಹೇಳಿದ್ದಾರೆ. ಇನ್ನು ಸನಾ ಅಂತ್ಯಕ್ರಿಯೆಯಲ್ಲಿ ನದೀಮ್ ಕುಟುಂಬಸ್ಥರು ಯಾರು ಬಾರದೆ ಇರುವುದನ್ನು ಗುರುತಿಸಿರುವ ಶಹೀನಾ ಪತಿಯೇ ಪೂರ್ವ ನಿಯೋಜಿತವಾಗಿ ಸನಾಳನ್ನು ಕೊಲೆ ಮಾಡಿದ್ದು ಅದನ್ನು ಅಪಘಾತ ಎಂದು ತೋರಿಸಲು ಹೊರಟಿದ್ದಾರೆ. ನನ್ನ ಮಗಳ ಕೊಲೆಗೆ ನ್ಯಾಯ ಸಿಗುವ ಹೊರೆಗೂ ನಾನು ಕಾನೂನು ಹೋರಾಟ ಮುಂದುವರೆಸುತ್ತೇನೆ.

ಸನಾ ಇಕ್ಬಾಲ್ ಸಾವಿಗೂ ಮುನ್ನ ಪತಿ ನದೀಮ್ ಮನೆಗೆ ಬಂದು ಆಕೆಯನ್ನು ಬಲವಂತವಾಗಿ ಹೊರಗಡೆ ಹೋಗಲು ಬರುವಂತೆ ಒತ್ತಾಯಿಸಿದ್ದ. ಇದಾದ ನಂತರ ಕಾರು ಅಪಘಾತಕ್ಕೀಡಾಗಿದ್ದು ಅಪಘಾತದಲ್ಲಿ ಸನಾ ಇಕ್ಬಾಲ್ ಸ್ಥಳದಲ್ಲೇ ಮೃತಪಟ್ಟಿದ್ದು ನದೀಮ್ ಸಣ್ಣ ಪುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸನಾಳನ್ನು ಕೊಲೆ ಮಾಡಲೆಂದೆ ನದೀಮ್ ಮನೆಗೆ ಬಂದು ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಿದ್ದ ಎಂದು ಶಹೀನಾ ಆರೋಪಿಸಿದ್ದು ಈ ಸಂಬಂಧ ನರ್ಸಂಗಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿರುವುದಾಗಿ ಹೇಳಿದ್ದಾರೆ.

ತೊಲಿ ಚೌಕಿಯ ಅಲ್ ಹಸನ್ ಕಾಲೋನಿಯಲ್ಲಿ ಸನಾ ಇಕ್ಬಾಲ್ ಅವರನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು ಈ ವೇಳೆ ಅಪಾರ ಸಂಖ್ಯೆಯಲ್ಲಿ ಬೈಕ್ ಸವಾರರು, ಸ್ನೇಹಿತರು, ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದರು. ನಂತರ ಬಜಾರ್ ಗೇಟ್ ಪ್ರದೇಶದಲ್ಲಿದ್ದ ಚಿತಾಗಾರದಲ್ಲಿ ಆಕೆಯ ಅಂತ್ಯಸಂಸ್ಕಾರ ನಡೆಯಿತು.

ಖಿನ್ನತೆ ಮತ್ತು ಆತ್ಮಹತ್ಯೆಯಂಥ ಸಮಸ್ಯೆಗಳ ವಿರುದ್ಧ ದೇಶಾದ್ಯಂತ ಜಾಗೃತಿ ಕಾರ್ಯಕ್ರಮ ನೀಡುವ ಸಲುವಾಗಿ ಸನಾ ಇಕ್ಬಾಲ್ 38 ಸಾವಿರ ಕಿ.ಮೀ ಬೈಕ್ ನಲ್ಲಿ ಸಂಚಾರ ಮಾಡಿದ್ದರು.

Comments are closed.