ರಾಷ್ಟ್ರೀಯ

ಸರ್ಜಿಕಲ್ ದಾಳಿ ಬಳಿಕ ಗಡಿದಾಟಿದ್ದ ಭಾರತೀಯ ಯೋಧನಿಗೆ 3 ತಿಂಗಳು ಜೈಲು!

Pinterest LinkedIn Tumblr


ನವದೆಹಲಿ: ಕಳೆದ ವರ್ಷ ಭಾರತೀಯ ಸೇನೆ ಪಾಕಿಸ್ತಾನ ಗಡಿಭಾಗದಲ್ಲಿ ನಡೆಸಿದ್ದ ಸರ್ಜಿಕಲ್ ದಾಳಿಯ(ಸೀಮಿತ ವ್ಯಾಪ್ತಿಯ ದಾಳಿ) ಬಳಿಕ ಗಡಿ ಉಲ್ಲಂಘಿಸಿ ಪ್ರವೇಶಿಸಿದ್ದ ಭಾರತೀಯ ಯೋಧನಿಗೆ ಸೇನಾ ನ್ಯಾಯಾಲಯ ಮೂರು ತಿಂಗಳ ಜೈಲುಶಿಕ್ಷೆ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

ಜನವರಿ ತಿಂಗಳಲ್ಲಿ ಯೋಧನನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು, ಇದೀಗ ಸೇನಾ ನ್ಯಾಯಾಲಯದಲ್ಲಿ ದೋಷಿ ಎಂದು ಸಾಬೀತಾಗಿದ್ದು, ಕನಿಷ್ಠ ಮೂರು ತಿಂಗಳ ಜೈಲುಶಿಕ್ಷೆ ವಿಧಿಸಬೇಕೆಂದು ಶಿಫಾರಸು ಮಾಡಿರುವುದಾಗಿ ವರದಿ ಹೇಳಿದೆ.

ಮೂಲಗಳ ಪ್ರಕಾರ, ಆರ್ಮಿ ಕೋರ್ಟ್ ಯೋಧ ಚಂದು ಬಾಬುಲಾಲ್ ಚವಾಣ್ ಗೆ ಕನಿಷ್ಠ ಮೂರು ತಿಂಗಳ ಜೈಲುಶಿಕ್ಷೆ ವಿಧಿಸಿದೆ. ಆದರೆ ಶಿಕ್ಷೆಯ ಪ್ರಮಾಣದ ಜಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಷ್ಟೇ ಅಂಕಿತ ಹಾಕಬೇಕಾಗಿದೆ.

ಕೋರ್ಟ್ ಮಾರ್ಷಲ್ ನಲ್ಲಿ ಯೋಧ ಚವಾಣ್ ದೋಷಿ ಎಂದು ಘೋಷಿಸಿದೆ. ಈ ತೀರ್ಪಿನ ವಿರುದ್ಧ ಚವಾಣ್ ಮೇಲ್ಮನವಿ ಸಲ್ಲಿಸಬಹುದಾಗಿದೆ. ಚವಾಣ್ 37ರಾಷ್ಟ್ರೀಯ ರೈಫಲ್ಸ್ ನ ಯೋಧನಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನಾ ಪಡೆ ಕಾಶ್ಮೀರ ಗಡಿಯಲ್ಲಿ ಸರ್ಜಿಕಲ್ ದಾಳಿ ನಡೆಸಿದ ಗಂಟೆಯ ನಂತರ ಚವಾಣ್ ಆಕಸ್ಮಿಕವಾಗಿ ಗಡಿದಾಟಿದ್ದರು. ಈ ಸಂದರ್ಭದಲ್ಲಿ ಬಂಧನಕ್ಕೀಡಾಗಿದ್ದ ಯೋಧ ಚವಾಣ್ ಅವರನ್ನು ಪಾಕಿಸ್ತಾನ ಜನವರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿತ್ತು.

-ಉದಯವಾಣಿ

Comments are closed.