ರಾಷ್ಟ್ರೀಯ

ಮಹಾರಾಜ ಹರಿಸಿಂಗ್‌ ಮೊಮ್ಮಗ ಪಿಡಿಪಿಗೆ ರಾಜೀನಾಮೆ

Pinterest LinkedIn Tumblr


ಜಮ್ಮು: ಆಡಳಿತಾರೂಢ ಪೀಪಲ್ಸ್‌ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಗೆ ಹಿರಿಯ ನಾಯಕ ವಿಕ್ರಮಾದಿತ್ಯ ಸಿಂಗ್‌ ರಾಜೀನಾಮೆ ನೀಡಿದ್ದಾರೆ. ಜಮ್ಮು ಪ್ರಾಂತ್ಯದ ಜನರ ಆಶೋತ್ತರಗಳ ಬಗ್ಗೆ ಪಿಡಿಪಿಗೆ ಯಾವುದೇ ಕಾಳಜಿ ಇಲ್ಲದಿರುವುದರಿಂದ ತಮಗೆ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕೊನೆಯ ಡೋಗ್ರಾ ದೊರೆ ಮಹಾರಾಜ ಹರಿ ಸಿಂಗ್‌ ಅವರ ಮೊಮ್ಮಗನಾಗಿರುವ ವಿಕ್ರಮಾದಿತ್ಯ ಸಿಂಗ್‌, 2015ರಲ್ಲಿ ಆಗಿನ ಪಿಡಿಪಿ ಅಧ್ಯಕ್ಷ ಮುಫ್ತಿ ಮೊಹಮ್ಮದ್‌ ಸಯೀದ್‌ ಸಮ್ಮುಖ ಪಕ್ಷ ಸೇರಿದ್ದರು. ಆಗ ರಾಜ್ಯ ವಿಧಾನಸಭೆಯ ಸದಸ್ಯರೂ ಆಗಿದ್ದರು.

‘ನಾನು ನನ್ನ ರಾಜೀನಾಮೆ ಪತ್ರವನ್ನು ಪಕ್ಷಾಧ್ಯಕ್ಷೆ ಮೆಹಬೂಬಾ ಮುಫ್ತಿ ಅವರಿಗೆ ಕಳುಹಿಸಿದ್ದೇನೆ. ತಕ್ಷಣವೇ ಅಂಗೀಕರಿಸುವಂತೆಯೂ ಕೋರಿದ್ದೇನೆ. ಪಕ್ಷದಲ್ಲಿ ಮುಂದುವರಿಯಲು ನನಗೆ ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಸಿಂಗ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಕಾಂಗ್ರೆಸ್‌ ನಾಯಕ ಕರಣ್ ಸಿಂಗ್‌ ಅವರ ಪುತ್ರನಾಗಿರುವ ವಿಕ್ರಮಾದಿತ್ಯ ಸಿಂಗ್‌, ‘ಕೆಲವು ತಿಂಗಳ ಹಿಂದೆಯೇ ಜಮ್ಮು ಪ್ರಾಂತ್ಯದ ಹಿತಾಸಕ್ತಿಗಳ ಬಗ್ಗೆ ಪಕ್ಷದ ವರಿಷ್ಠರಲ್ಲಿ ಮಾತನಾಡಿದ್ದೆ. ಆದರೆ ಪಕ್ಷ ಎಲ್ಲವನ್ನೂ ತಿರಸ್ಕರಿಸಿತು’ ಎಂದು ಟೀಕಿಸಿದರು.

ರೋಹಿಂಗ್ಯಾಗಳ ಅಕ್ರಮ ವಾಸ್ತವ್ಯ ಮತ್ತು ಮಹಾರಾಜ ಹರಿ ಸಿಂಗ್‌ ಜನ್ಮಶತಮಾನೋತ್ಸವಕ್ಕೆ ಸಾರ್ವಜನಿಕ ರಜೆ ಘೋಷಿಸಬೇಕೆಂಬ ವಿಚಾರವೂ ಸೇರಿದಂತೆ ತಮ್ಮ ಪ್ರಸ್ತಾವಗಳನ್ನು ಪಕ್ಷ ನಿರ್ಲಕ್ಷಿಸಿದೆ ಎಂದು ಅವರು ತಿಳಿಸಿದರು.

Comments are closed.