ರಾಷ್ಟ್ರೀಯ

ಗುಜರಾತ್ ಚುನಾವಣೆ: ಹಾರ್ದಿಕ್ ಪಟೇಲ್, ಅಲ್ಪೇಶ್ ಥಾಕೂರ್ ಗೆ ಕಾಂಗ್ರೆಸ್ ಆಹ್ವಾನ

Pinterest LinkedIn Tumblr


ಅಹಮದಾಬಾದ್: ಈ ವರ್ಷಾಂತ್ಯಕ್ಕೆ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ವಿವಿಧ ಸಮುದಾಯಗಳ ಬೆಂಬಲ ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್, ಪಟೇಲ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್, ಥಾಕೂರ್ ಸಮುದಾಯ ಅಲ್ಪೇಶ್ ಥಾಕೂರ್ ಹಾಗೂ ದಲಿತ ನಾಯಕ ಜಿಗ್ನೇಶ್ ಮೆವಾನಿ ಅವರಿಗೆ ಬಿಜೆಪಿ ಸೋಲಿಸಲು ನಮ್ಮೊಂದಿಗೆ ಕೈಜೋಡಿಸುವಂತೆ ಆಹ್ವಾನ ನೀಡಿದೆ.

ಗುಜರಾತ್ ಕಾಂಗ್ರೆಸ್ ಈ ಮೂವರು ನಾಯಕರಿಗೆ ಆಹ್ವಾನ ನೀಡಿರುವುದರ ಹೊರತಾಗಿ ಗುಜರಾತ್ ನಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಯೊಂದಿಗೆ ಚುನಾವಣಾ ಪೂರ್ವ ಮೈತ್ರಿಯ ಸುಳಿವು ನೀಡಿದೆ.

ಇಂದು ಅಹಮದಾಬಾದ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುಜರಾತ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿಂಗ್ ಸೋಲಂಕಿ ಅವರು, ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ತಮ್ಮ ಪಕ್ಷ 182 ಸ್ಥಾನಗಳ ಪೈಕಿ ಕನಿಷ್ಠ 125 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾರ್ದಿಕ್ ಪಟೇಲ್ ಅವರು ತಮ್ಮ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವುದನ್ನು ನಾವು ಗೌರವಿಸುತ್ತೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುವಂತೆ ನಾನು ಅವರಿಗೆ ಮನವಿ ಮಾಡುತ್ತಿದ್ದೇನೆ. ಅಲ್ಲದೆ ಹಾರ್ದಿಕ್ ಪಟೇಲ್ ಬಯಸಿದರೆ ಕಾಂಗ್ರೆಸ್ ಟಿಕೆಟ್ ನೀಡಲು ಸಿದ್ಧ ಎಂದು ಸೋಲಂಕಿ ಅವರು ತಿಳಿಸಿದ್ದಾರೆ.

ಗುಜರಾತ್ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಎಲ್ಲಾ ರೀತಿಯ ಯತ್ನಗಳನ್ನು ಮಾಡುತ್ತಿದೆ. ಆದರೂ ಈ ಬಾರಿ ಕಾಂಗ್ರೆಸ್ ಗೆಲುವನ್ನು ತಡೆಯಲು ಬಿಜೆಪಿಯಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Comments are closed.