ರಾಷ್ಟ್ರೀಯ

ತಮಿಳುನಾಡಿನಲ್ಲಿ ನಿಲ್ಲದ ಕದನ: ಸರ್ಕಾರ ರಚನೆಗೆ ಅವಕಾಶ ನೀಡದಿದ್ದರೆ, ಹೋರಾಟಕ್ಕೆ ಶಶಿಕಲಾ ನಿರ್ಧಾರ

Pinterest LinkedIn Tumblr


ಚೆನ್ನೈ, ಫೆ. ೧೩- ತಮಿಳುನಾಡಿನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ರಾಜಕೀಯದ ಹಗ್ಗಜಗ್ಗಾಟ ಕ್ಷಣಕ್ಷಣಕ್ಕೂ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಪ್ರತ್ಯೇಕ ಸಭೆ ನಡೆಸುವ ಮೂಲಕ ಮುಂದಿನ ಹೋರಾಟಕ್ಕೆ ಅಣಿಯಾಗಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಓ. ಪನ್ನೀರ್ ಸೆಲ್ವಂ ಅಧಿಕಾರಿಗಳ ಸಭೆ ನಡೆಸಿ, ಕಳೆದೊಂದು ವಾರದಿಂದ ಮಂಕಾಗಿದ್ದ ಆಡಳಿತಕ್ಕೆ ಚುರುಕು ನೀಡುವ ಕೆಲಸ ಮಾಡಿದರೆ, ಮತ್ತೊಂದೆಡೆ ಸರ್ಕಾರ ರಚನೆಗೆ ಅವಕಾಶ ನೀಡದ ರಾಜ್ಯಪಾಲರ ನಡೆಯ ವಿರುದ್ಧ ಮುಂದಿನ ಹೋರಾಟಕ್ಕೆ ಶಾಸಕರ ಸಭೆಯಲ್ಲಿ ಶಶಿಕಲಾ ನಿರ್ಧರಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರೊಂದಿಗೆ ಎರಡನೇ ಆರೋಪಿಯಾಗಿರುವ ಶಶಿಕಲಾ ಅವರ ಪ್ರಕರಣ ವಾರಾಂತ್ಯದಲ್ಲಿ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಹೊರಬೀಳಲಿದ್ದು, ದಿನದಿಂದ ದಿನಕ್ಕೆ ಕುತೂಹಲ ಕೆರಳಿಸಿರುವ ರಾಜಕೀಯದ ನಡುವೆಯೂ ಎಲ್ಲರ ಚಿತ್ತ ಸುಪ್ರೀಂ ತೀರ್ಪಿನತ್ತ ನೆಟ್ಟಿದೆ.
ಶಾಸಕರ ಸಭೆಯಲ್ಲಿ ಮಾತನಾಡಿದ ಶಶಿಕಲಾ ನಟರಾಜನ್ ಜೈಲು ನನಗೇನೂ ಹೊಸದಲ್ಲ. ಅಮ್ಮನ ಜೊತೆ ಬೆಂಗಳೂರು ಹಾಗೂ ಚೆನ್ನೈನ ವಿವಿಧ ಜೈಲುಗಳಲ್ಲಿ ಈಗಾಗಲೇ ಹಲವು ಸಮಯ ಕಳೆದಿದ್ದೇನೆ, ಮುಂದೆಯೂ ಯಾವುದೇ ಜೈಲಿಗೆ ಹೋಗಲು ನಾನು ಸಿದ್ಧಳಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಯಾರಿಂದಲೂ ಪಕ್ಷವನ್ನು ನಾಶಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಅಚಲ ವಿಶ್ವಾಸವಿದೆ. ಸಾಮಾನ್ಯ ಮಹಿಳೆಯ ಶಕ್ತಿಯನ್ನು ಯಾರೂ ಕೂಡ ಅಲ್ಲಗಳೆಯುವಂತಿಲ್ಲ. ತಮ್ಮ ತಾಕತ್ತು ಏನು ಎನ್ನುವುದನ್ನು ಪ್ರದರ್ಶಿಸುವುದಾಗಿ ಹೇಳಿದ್ದಾರೆ.
ತಮಗೆ 129 ಶಾಸಕರ ಬೆಂಬಲವಿದೆ. ಹೀಗಿದ್ದರೂ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡದೆ ಇರುವುದು ದುರದೃಷ್ಟಕರ. ರಾಜ್ಯಪಾಲರ ನಡೆಯ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.
ರಾಜ್ಯಪಾಲ ವಿದ್ಯಾಸಾಗರ್ ರಾವ್ ಕಾದುನೋಡುವ ತಂತ್ರಕ್ಕೆ ಮೊರೆಹೋಗಿದ್ದು, ಶಶಿಕಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುವವರೆಗೂ ಯಾವುದೇ ನಿರ್ಧಾರಕ್ಕೆ ಬರದಿರಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಶಶಿಕಲಾ ಆರೋಪಿಯೆಂದು ತೀರ್ಪು ಹೊರಬಿದ್ದರೆ, ಮುಂದಿನ 6 ವರ್ಷಗಳ ಕಾಲ ಶಶಿಕಲಾ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಒಂದು ವೇಳೆ ಶಶಿಕಲಾ ಪರವಾಗಿ ತೀರ್ಪು ಹೊರಬಂದರೆ, ಶಾಸಕರಲ್ಲದ ಶಶಿಕಲಾ ಮುಂದಿನ 6 ತಿಂಗಳ ಒಳಗಾಗಿ ಶಾಸಕರಾಗಿ ಆಯ್ಕೆಯಾಗಬೇಕಾಗುತ್ತದೆ. ಹೀಗಾಗಿ ರಾಜ್ಯಪಾಲರ ನಡೆ ಕುತೂಹಲ ಕೆರಳಿಸಿದೆ.
ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂಗೆ ದಿನೇ ದಿನೇ ಶಾಸಕರು ಮತ್ತು ಸಂಸದರ ಬಲ ಹೆಚ್ಚುತ್ತಿದೆ. ಈಗಾಗಲೇ 11 ಸಂಸದರು ಹಾಗೂ 7 ಶಾಸಕರು ಬಹಿರಂಗ ಬೆಂಬಲ ಘೋಷಿಸಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ನ‌ಡೆಯುತ್ತಿರುವ ಮುಸುಕಿನ ಗುದ್ದಾಟದಲ್ಲಿ ರಾಜ್ಯದ ಆಡಳಿತ ಯಂತ್ರ ಕುಸಿದಿದ್ದು, ಸ್ಥಿರ ಸರ್ಕಾರ ರಚನೆಗೆ ಒತ್ತು ನೀಡುವಂತೆ ಆಗ್ರಹಿಸಿ, ವಿರೋಧ ಪಕ್ಷ ಡಿಎಂಕೆ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದೆ.
ಕಳೆದ ನಾಲ್ಕು ದಿನಗಳಿಂದ `ಗೋಲ್ಡನ್ ಬೆ ರೆಸಾರ್ಟ್` ಬಿರುಸಿನ ರಾಜಕೀಯ ಚಟುವಟಿಕೆಯ ತಾಣವಾಗಿದೆ. ಖಾಸಗಿ ಪಡೆಗಳು ರೆಸಾರ್ಟ್‌ನ ಕಾವಲಿಗೆ ನಿಂತಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಶಶಿಕಲಾ ನಟರಾಜನ್ ಅವರ ಬೆಂಬಲಿಗ ಶಾಸಕರಿಗೆ ಭದ್ರತೆ ಒದಗಿಸಲಾಗಿದೆ.
ರೆಸಾರ್ಟ್ ಪ್ರವೇಶಿಸುವ ದ್ವಾರದ ಎಲ್ಲಾ ಹಾದಿಗಳನ್ನು ಮುಚ್ಚಲಾಗಿದೆ. ಪತ್ರಕರ್ತರು ರೆಸಾರ್ಟ್‌ನ ರಾಜಕೀಯ ಚಟುವಟಿಕೆಗಳ ವರದಿ ಮಾಡಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ. ಕೆಲವರು ಸಾಗರ ಮಾರ್ಗದಲ್ಲಿ ತೆರಳಿ ರೆಸಾರ್ಟ್ ಅನ್ನು ಕ್ಯಾಮೆರಾದ ಸೆರೆ ಹಿಡಿಯಲು ಯತ್ನಿಸಿದರೆ, ಖಾಸಗಿ ವಾಹಿನಿಯೊಂದು 6 ಎಕರೆ ಜಾಗದಲ್ಲಿ ವಿಸ್ತರಿಸಿಕೊಂಡಿರುವ ರೆಸಾರ್ಟ್‌ನಲ್ಲಿನ ಚಲನವಲನ ಸೆರೆಗೆ ಡ್ರೋನ್ ಬಳಸಿದೆ.
ಇದನ್ನು ಗಮನಿಸಿದ ಖಾಸಗಿ ಭದ್ರತಾ ಸಿಬ್ಬಂದಿಗಳು ಕಲ್ಲು ತೂರಿ ಡ್ರೋನ್ ಅನ್ನು ಹೊಡೆದುರುಳಿಸಲು ಯತ್ನಿಸಿದ್ದಾರೆ. ಕೆಲವು ಪತ್ರಕರ್ತರ ಕ್ಯಾಮರಾ ಮತ್ತು ಮೊಬೈಲ್ ಫೋನ್‌ಗಳನ್ನು ಕೂಡ ಕಿತ್ತುಕೊಂಡಿದ್ದಾರೆ ಎಂದೂ ಆರೋಪಿಸಲಾಗಿದೆ.

Comments are closed.