ರಾಷ್ಟ್ರೀಯ

ರಾಜೀವ್ ಹತ್ಯೆಯನ್ನು ಅಮೆರಿಕದ ಸಿಐಎ 5 ವರ್ಷ ಮೊದಲೇ ಊಹಿಸಿತ್ತು!

Pinterest LinkedIn Tumblr


ನವದೆಹಲಿ(ಜ.29): ಜಾಗತಿಕ ನಾಯಕರ ನೀತಿ, ನಿಲುವು, ನಿರ್ಧಾರಗಳ ಬಗ್ಗೆ ಅಮೆರಿಕ ರಹಸ್ಯವಾಗಿ ಮಾಹಿತಿ ಸಂಗ್ರಹಿಸುವುದು ಹೊಸತೇನಲ್ಲ. ಆದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿಚಾರದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿತ್ತು. ರಾಜೀವ್ ಗಾಂಧಿ ಹತ್ಯೆಯಾಗಿಬಿಟ್ಟರೆ ಅಥವಾ ರಾಷ್ಟ್ರ ರಾಜಕಾರಣದಿಂದ ‘ದಿಢೀರನೆ ನಿರ್ಗಮಿಸಿ ಬಿಟ್ಟರೆ’ ಏನಾಗಬಹುದು ಎಂಬ ಕುರಿತು ಅವರು ಹತ್ಯೆಯಾಗುವ ಐದು ವರ್ಷ ಮೊದಲೇ ವರದಿಯೊಂದನ್ನು ಸಿದ್ಧಪಡಿಸಿಟ್ಟುಕೊಂಡಿತ್ತು ಎಂಬ ಕುತೂಹಲಕರ ಮಾಹಿತಿ ಬೆಳಕಿಗೆ ಬಂದಿದೆ.
‘ರಾಜೀವ್ ನಂತರ ಭಾರತ…’ ಎಂಬ ಈ ವರದಿ 1986ರ ಮಾರ್ಚ್‌ನಲ್ಲಿ ತಯಾರಾಗಿತ್ತು ಎಂಬ ಅಂಶ ಸಿಐಎ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಗಳಲ್ಲಿ ಇದೆ. ಹಲವಾರು ಅಂಶಗಳನ್ನು ಈ ದಾಖಲೆಯಿಂದ ಅಳಿಸಲಾಗಿದೆ.
1989ರಲ್ಲಿ ರಾಜೀವ್ ಅಧಿಕಾರಾವಧಿ ಮುಗಿಯಲಿದೆ. ಆದರೆ ಅವರ ಅವಧಿ ಮುಗಿಯುವ ಹೊತ್ತಿಗೆ ರಾಜೀವ್‌ಗೆ ಹತ್ಯೆ ಬೆದರಿಕೆಯೂ ಇದೆ. ಒಂದು ವೇಳೆ ರಾಜೀವ್ ಅವರು ಸಿಖ್ ಅಥವಾ ಕಾಶ್ಮೀರಿ ಮುಸ್ಲಿಮರಿಂದ ಹತ್ಯೆಗೆ ಒಳಗಾದರೆ ಭಾರಿ ಪ್ರಮಾಣದ ಕೋಮು ದಳ್ಳುರಿ ಸೃಷ್ಟಿಯಾಗಲಿದೆ. ರಾಷ್ಟ್ರಪತಿಗಳು ಸೇನೆ ಹಾಗೂ ಅರೆಸೇನಾಪಡೆಗಳನ್ನು ದೇಶಾದ್ಯಂತ ನಿಯೋಜಿಸಿದರೂ ಅದನ್ನು ತಡೆಯಲು ಆಗದು ಎಂಬ ಅಂಶ ವರದಿಯಲ್ಲಿದೆ.
ಜತೆಗೆ ರಾಜೀವ್ ಅವರು ನಿರ್ಗಮನದ ಬಳಿಕ ಪಿ.ವಿ. ನರಸಿಂಹರಾವ್ ಹಾಗೂ ವಿ.ಪಿ. ಸಿಂಗ್‌’ರಂತಹ ನಾಯಕರು ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆ ಎಂದೂ ಹೇಳಿದೆ.
ವಿಶೇಷ ಎಂದರೆ ಈ ವರದಿ ತಯಾರಾದ ಐದು ವರ್ಷಗಳ ಬಳಿಕ ಅಂದರೆ 1991ರಲ್ಲಿ ರಾಜೀವ್ ಅವರು ತಮಿಳುನಾಡಿನಲ್ಲಿ ಎಲ್‌’ಟಿಟಿಇ ಉಗ್ರರಿಂದ ಹತ್ಯೆಗೆ ಒಳಗಾಗಿದ್ದರು. ಇದಾದ ಬಳಿಕ ನರಸಿಂಹರಾವ್ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

Comments are closed.