ರಾಷ್ಟ್ರೀಯ

ಜಲ್ಲಿಕಟ್ಟು ವಿವಾದದ ವೇಳೆ ರಕ್ಷಣೆ ನೀಡಬೇಕಿದ್ದ ಪೊಲೀಸರೇ ವಾಹನಗಳಿಗೆ ಬೆಂಕಿ ಹಚ್ಚಲು ಕಾರಣವೇನು?

Pinterest LinkedIn Tumblr

ಚೆನ್ನೈ: ಜಲ್ಲಿಕಟ್ಟು ವಿವಾದ ಸಂಬಂಧ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಪೊಲೀಸರೇ ವಾಹನಗಳಿಗೆ ಬೆಂಕಿ ಹಚ್ಚಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿನ ದೃಶ್ಯಗಳೇ ಪೊಲೀಸರು ಆಕ್ರೋಶಗೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ವಿಡಿಯೊವೊಂದು ಇಂತಹುದೊಂದು ಪ್ರಶ್ನೆ ಹುಟ್ಟುಹಾಕಿದೆ. ಜಲ್ಲಿಕಟ್ಟು ವಿವಾದ ಸಂಬಂಧ ನಡೆಯುತ್ತಿದ್ದ ಪ್ರತಿಭಟನೆ ಮೊಟ್ಟ ಮೊದಲು ಹಿಂಸಾರೂಪಕ್ಕೆ ತಿರುಗಿದ್ದೇ ಐಸ್ ಹೌಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂದು ಹೇಳಲಾಗುತ್ತಿದೆ.

ಪ್ರತಿಭಟನೆ ನಡೆಸುತ್ತಿದ್ದ ನೂರಾರು ಯುವಕರು ಏಕಾಏಕಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಅಲ್ಲದೆ ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ (ಪ್ರಸ್ತುತ ಪೊಲೀಸರದ್ದು ಎನ್ನಲಾಗುತ್ತಿರುವ ವಾಹನಗಳು) ದ್ವಿಚಕ್ರವಾಹನಗಳನ್ನು ಬೆಂಕಿ ಹಾಕಿ ಸುಟ್ಟುಹಾಕಿದ್ದರು. ವಾಹನಗಳಿಗೆ ಬೆಂಕಿ ಹಾಕಿದ್ದು ನಿಜಕ್ಕೂ ಪ್ರತಿಭಟನಾಕಾರರೇ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎನ್ನುವ ಕಾರಣಕ್ಕೆ ವಾಹನಗಳಿಗೆ ಬೆಂಕಿ ಇಟ್ಟ ದೇಶ ವಿರೋಧಿಗಳೇ ಎಂಬುದರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಐಸ್ ಹೌಸ್ ಪೊಲೀಸ್ ಠಾಣೆ ಮೇಲಿನ ದಾಳಿ ಬಳಿಕವೇ ಚೆನ್ನೈ ಮಹಾನಗರ ಪ್ರಕ್ಷುಬ್ದವಾಗಿದ್ದು ಎಂದು ಹೇಳಲಾಗುತ್ತಿದೆ.

ಇದೇ ಕಾರಣದಿಂದ ಚೆನ್ನೈ ಪೊಲೀಸರು ಆಕ್ರೋಶಗೊಂಡು ಪ್ರತಿಭಟನಾಕಾರರನ್ನು ಮನಬಂದತೆ ಥಳಿಸಿ ಕೈಗೆ ಸಿಕ್ಕ ವಾಹನಗಳಿಗೆ ಬೆಂಕಿ ಇಟ್ಟರು ಎನ್ನುವ ವಾದ ಕೂಡ ಕೇಳಿಬರುತ್ತಿದೆ.

ಜಲ್ಲಿಕಟ್ಟು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದರಿಂದ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಕ್ರಮೇಣ ಹಿಂಸಾಚಾರ ಇಡೀ ಚೆನ್ನೈ ನಗರಕ್ಕೆ ಆವರಿಸಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಮಟ್ಟಿಗೆ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ವೇಳೆ ರಕ್ಷಣೆ ಕೊಡಬೇಕಿದ್ದ ಪೊಲೀಸರೇ ವಾಹನಗಳಿಗೆ ಬೆಂಕಿ ಇಡುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದರು. ಪೊಲೀಸರು ವಾಹನಗಳಿಗೆ ಬೆಂಕಿ ಇಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

Comments are closed.