ರಾಷ್ಟ್ರೀಯ

ಹೆಚ್ಚು ವಿದ್ಯುತ್ ಬಳಸಿದರೆ ಕಡಿಮೆ ದರ!

Pinterest LinkedIn Tumblr


ನವದೆಹಲಿ: ಅಧಿಕಾರಕ್ಕೆ ಬಂದ 2 ವರೆ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಚ್ಚರಿಯ ಸುಧಾರಣೆಗಳನ್ನು ತಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಈಗ ವಿದ್ಯುತ್ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ನಿಜವಾಗಿಯೂ ವಿದ್ಯುತ್ ಸಂಚಲನ ಮೂಡಿಸುವಂತಹ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.
ವಿದ್ಯುತ್ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ತರುವ ನಿಟ್ಟಿನಲ್ಲಿ ಅಧಿಕಾರಿಗಳ ಸಮಿತಿಯೊಂದು, ಹೆಚ್ಚು ವಿದ್ಯುತ್ ಬಳಸಿದಂತೆಲ್ಲಾ ಕಡಿಮೆ ವಿದ್ಯುತ್ ದರ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳಿಸಲು ಸಿದ್ಧತೆ ನಡೆಸಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಪ್ರಸ್ತುತ ಹೆಚ್ಚು ವಿದ್ಯುತ್ ಬಳಸಿದರೆ ಹೆಚ್ಚು ದರ ವಿಧಿಸುವ ನಿಯಮ ಜಾರಿಯಲ್ಲಿದ್ದು, ನಿರ್ದಿಷ್ಟ ಮಿತಿಯ ಬಳಕೆಯನ್ನು ದಾಟಿದರೆ ಅತಿ ಹೆಚ್ಚು ದರ ಪಾವತಿ ಮಾಡುವ ಸ್ಥಿತಿ ಇದೆ. ಆದರೆ ಈ ನಿಯಮಗಳನ್ನು ಬದಲಾವಣೆ ಮಾಡಿ ಹೆಚ್ಚು ವಿದ್ಯುತ್ ಬಳಸಿದಂತೆಲ್ಲಾ ಕಡಿಮೆ ವಿದ್ಯುತ್ ದರ ವಿಧಿಸುವ ನಿಯಮ ಜಾರಿಗೆ ತರಲು ಇದು ಸೂಕ್ತ ಸಮಯ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ವಿದ್ಯುತ್ ದರ ನಿಗದಿಯನ್ನು ವಿದ್ಯುತ್ ಅಭಾವ ಪರಿಸ್ಥಿತಿಗೆ ತಕ್ಕಂತೆ ರೂಪಿಸಲಾಗಿದ್ದು, ಭಾರತ ಸ್ವಾತಂತ್ರ್ಯವಾದಾಗಿನಿಂದ ಈ ನಿಯಮಗಳನ್ನು ಬದಲಾವಣೆ ಮಾಡಲಾಗಿಲ್ಲ. ಈಗ ಭಾರತಕ್ಕೆ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದ್ದು, ಈಗಿರುವ ಚೌಕಟ್ಟನ್ನು ಬದಲಾವಣೆ ಮಾಡುವ ಅಗತ್ಯವಿದೆ ಎಂದು ಸಮಿತಿ ಸಿದ್ಧಪಡಿಸಿರುವ ಶಿಫಾರಸ್ಸಿನಲ್ಲಿ ಹೇಳಿದೆ.
ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿ, ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಧ್ಯಕ್ಷ, ತಮಿಳುನಾಡು ಬಿಹಾರ ರಾಜ್ಯಗಳ ವಿದ್ಯುತ್ ಇಲಾಖೆ ಕಾರ್ಯದರ್ಶಿಗಳು ಹಾಗೂ ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶದ ವಿದ್ಯುತ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಮಿತಿಯಲ್ಲಿದ್ದು ಈ ಕುರಿತ ಅಂತಿಮ ವರದಿ ಜನವರಿ ಅಂತ್ಯದ ವೇಳೆಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.

Comments are closed.