ರಾಷ್ಟ್ರೀಯ

ಜ. 16ಕ್ಕೆ ಸಮಾಜವಾದಿ ಗುರುತು ಸೈಕಲ್ ಗೆ ತೆರೆ

Pinterest LinkedIn Tumblr


ನವದೆಹಲಿ, ಜ. ೧೪- ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿಯ ಎರಡು ಬಣಗಳಲ್ಲಿ ಪಕ್ಷದ ಸೈಕಲ್ ಚಿನ್ಹೆ ಯಾರಿಗೆ ಸಿಗುತ್ತದೆ ಎಂಬ ಕುತೂಹಲಕ್ಕೆ ಸೋಮವಾರ ಚುನಾವಣಾ ಆಯೋಗ ತೆರೆ ಎಳೆಯಲಿದೆ.
ಪಕ್ಷದ ಸೈಕಲ್ ಚಿನ್ಹೆ ತಮಗೆ ಸೇರಬೇಕು ಎಂಬ ಎರಡೂ ಬಣಗಳ ಪ್ರತಿಪಾದನೆಯನ್ನು ಆಲಿಸಿರುವ ಚುನಾವಣಾ ಆಯೋಗ ಸೋಮವಾರ ಚಿನ್ಹೆ ಯಾರಿಗೆ ಸೇರುತ್ತದೆ ಎಂಬುದರ ಘೋಷಣೆ ಮಾಡಲೇಬೇಕಿದೆ. ಕಾರಣ ಉತ್ತರ ಪ್ರದೇಶದ ಮೊದಲ ಹಂತದ ಮತದಾನದ ಅಧಿಸೂಚನೆ ಮಂಗಳವಾರ (ಜ. 17) ಹೊರಬೀಳಬೇಕಾಗಿರುವುದರಿಂದ ಅದರ ಒಳಗೆ ಸಮಾಜವಾದಿ ಪಕ್ಷದ ಚಿನ್ಹೆ ಬಿಕ್ಕಟ್ಟು ಬಗೆಹರಿಯಬೇಕು.
ಕಾಂಗ್ರೆಸ್ ಕನಸು
ಇದೇ ವೇಳೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣದೊಂದಿಗೆ ಕಾಂಗ್ರೆಸ್ ಮೈತ್ರಿ ಘೋಷಣೆಯು ಹೊರಬೀಳುವ ಸಂಭವ ಇದೆ.
ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶ ರಾಜಕಾರಣಕ್ಕೆ ಅಪ್ರಸ್ತುತವಾಗಿರುವ ಕಾಂಗ್ರೆಸ್, ಈ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಬಣದೊಂದಿಗೆ ಮೈತ್ರಿ ಮಾಡಿಕೊಂಡು, ಆ ರಾಜ್ಯದಲ್ಲಿ ನೆಲೆ ಕಂಡುಕೊಳ್ಳುವ ಕನಸಿನಲ್ಲಿದೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್‌ಗೆ ಧೈರ್ಯ ಸಾಲದು. ಹೀಗಾಗಿ ಎಸ್‌ಪಿ ಅಥವಾ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಚಿಂತಿಸಿತ್ತಾದರೂ, ಎಸ್‌ಪಿಯ ಮುಲಾಯಂ ಬಣ ಮತ್ತು ಮಾಯಾವತಿ ಅವರ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗದು. ಉಳಿದದ್ದು ಅಖಿಲೇಶ್ ಬಣ. ಹೀಗಾಗಿಯೇ ಸಮಾಜವಾದಿ ಪಕ್ಷ ಎರಡು ಬಣಗಳಾಗುತ್ತಿದ್ದಂತೆ ಮುಖ್ಯಮಂತ್ರಿ ಅಖಿಲೇಶ್ ಬಣದೊಂದಿಗೆ ಮೈತ್ರಿ ಕುರಿತಂತೆ ಚರ್ಚೆ ಆರಂಭಿಸಿತ್ತು.
100 ಸೀಟು
ಕಾಂಗ್ರೆಸ್ ಪರವಾಗಿ ಹಿರಿಯ ನಾಯಕ ಹಾಗೂ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿರುವ ಗುಲಾಂ ನಬಿ ಅಜಾದ್ ಅವರು, ಅಖಿಲೇಶ್ ಬಣದ ರಾಜಕೀಯ ಮುಖ್ಯ ಸೂತ್ರದಾರ ರಾಮಗೋಪಾಲ್ ಯಾದವ್‌ರೊಂದಿಗೆ ಹಲವು ಬಾರಿ ಚರ್ಚೆ ನಡೆಸಿದ್ದರು.
ಅದರಂತೆ ಉತ್ತರ ಪ್ರದೇಶ ವಿಧಾನಸಭೆಯ 404 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ 100 ಸ್ಥಾನ ಬಿಟ್ಟುಕೊಡಲು ಸಮಾಜವಾದಿ ಪಕ್ಷ ಒಪ್ಪಿಗೆ ನೀಡಿತ್ತು.
ಅಖಿಲೇಶ್ ಬಣ 303 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 100 ಸ್ಥಾನಗಳಲ್ಲಿ ಸ್ಪರ್ಧಿಸಲು ಎರಡು ಪಕ್ಷಗಳೂ ಸಹಮತಕ್ಕೆ ಬಂದಿವೆ.
ಸೋಮವಾರ ಸಮಾಜವಾದಿ ಪಕ್ಷದ ಚಿನ್ಹೆ ವಿವಾದ ಬಗೆಹರಿಯುತ್ತಿದ್ದಂತೆ, ಈ ಮೈತ್ರಿಕೂಟದ ಅಂತಿಮ ತೀರ್ಮಾನವೂ ಹೊರಬೀಳಲಿದೆ.
ಚುನಾವಣಾ ಘೋಷಣೆಯನ್ನು ಉತ್ತರ ಪ್ರದೇಶದ ಎಲ್ಲಾ 404 ಸ್ಥಾನಗಳಲ್ಲಿ ಸ್ಪರ್ಧಿಸುವ ಉತ್ಸಾಹದಲ್ಲಿದ್ದ ಕಾಂಗ್ರೆಸ್ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು.
ಆದರೆ ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಧೈರ್ಯ ಕಳೆದುಕೊಂಡ ಕಾಂಗ್ರೆಸ್ ಈಗ ಅಖಿಲೇಶ್ ಬಣದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಅಲ್ಲಿ ನೆಲೆಕಂಡುಕೊಳ್ಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.