ರಾಷ್ಟ್ರೀಯ

ಮುದ್ರಣಾಲಯದಿಂದ ಮನೆಗಳಿಗೆ ನೋಟುಗಳು ರವಾನೆ

Pinterest LinkedIn Tumblr


ನವದೆಹಲಿ, ಜ. ೧೧- ಸರಕಾರಿ ಮುದ್ರಣಾಲಯಗಳಲ್ಲಿ ಮುದ್ರಣಗೊಂಡ ಹೊಸ 2000 ರೂ. ನೋಟುಗಳ ಕಂತೆಗಳು ಬ್ಯಾಂಕ್ ವಿತರಣಾ ಕೇಂದ್ರಗಳಿಗೆ ತಲುಪುವ ಮೊದಲೇ ರವಾನೆಯಾಗುವ ಮಾರ್ಗದಲ್ಲಿ ಖಾಸಗಿಯವರ ಮನೆಗಳಿಗೆ ರವಾನೆಯಾಗಿರುವ ಪ್ರಕರಣದ ಹಿಂದೆ `ಭಾರಿ ವ್ಯವಸ್ಥಿತ ಜಾಲ’ದ ಕೈವಾಡವಿದೆ.
ಕಳೆದ ತಿಂಗಳು ದಕ್ಷಿಣ ದೆಹಲಿ ಮಾರುಕಟ್ಟೆ ಸಮೀಪ ಕೃಷ್ಣಕುಮಾರ್ ಎಂಬುವವರು 20 ಲಕ್ಷ ಮೊತ್ತದ 2000 ರೂ.ಗಳ ನೋಟುಗಳ ಬಂಡಲುಗಳನ್ನು ಕೊರಿಯರ್ ಮೂಲಕ ಖಾಸಗಿ ವ್ಯಕ್ತಿಗೆ ಬಟವಾಡೆ ಮಾಡಲು ಹೋಗುತ್ತಿದ್ದಾಗ ಆದಾಯ ತೆರಿಗೆ ಮತ್ತು ಬೇಹುಗಾರಿಕೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತೆರಿಗೆ ಮತ್ತು ಬೇಹುಗಾರಿಕಾ ಸಂಸ್ಥೆಗಳು, ಮುದ್ರಣಾಲಯಗಳಿಂದ ವ್ಯಕ್ತಿಗಳ ಮನೆಗೆ ಹೊಸ ನೋಟುಗಳ ಬಂಡಲುಗಳ ರವಾನೆಯಾದ ಪ್ರಕರಣದ ಹಿಂದೆ ವಂಚಕರ ದೊಡ್ಡ ಜಾಲವೇ ಇದೆ ಎಂದು ಹೇಳಿದೆ.
ಹೇಗೆ ಸಾಧ್ಯ?
ಮಹಾರಾಷ್ಟ್ರದ ನಾಸಿಕ್ ನೋಟು ಮುದ್ರಣಾಲಯ ಮತ್ತು ಪಶ್ಚಿಮ ಬಂಗಾಳದ ಸಲಬೋರೆ ಮುದ್ರಣಾಲಯಗಳಲ್ಲಿ ಮುದ್ರಣಗೊಂಡ ನೋಟುಗಳು ಬ್ಯಾಂಕ್ ವಿತರಣಾ ಕೇಂದ್ರಗಳಿಗೆ ತಲುಪುವುದರಲ್ಲಿ ಸಾಕಷ್ಟು ಬಿಗಿ ಪ್ರಕ್ರಿಯೆಗಳಿವೆ. ಆದರೆ, ಹೀಗೆ ಮುದ್ರಣಗೊಂಡು, ಆರ್‌ಬಿಐ ಅಧಿಕೃತ ಮುದ್ರೆ ಹೊತ್ತಿರುವ ನೋಟಿನ ಬಂಡಲುಗಳು ಮನೆಗಳಿಗೆ ರವಾನೆಯಾದದ್ದಾದರೂ ಹೇಗೆ? ಎಂಬುದರ ಮೂಲ ಹುಡುಕಲು ತೆರಿಗೆ ಮತ್ತು ಬೇಹುಗಾರಿಕಾ ಇಲಾಖೆ ಭಾರಿ ಜಾಲಾಟದಲ್ಲಿ ತೊಡಗಿದೆ.
ಹೀಗಾಗಲು ಒಳಗಿನವರು ಭಾಗವಹಿಸಿರಲೇಬೇಕು, ಯಾರು ಆ ಒಳಗಿನವರು? ಅವರಿಗೂ ನೋಟು ತಲುಪಬೇಕಾದವರಿಗೂ ಸಂಪರ್ಕ ಸಂಬಂಧ ಹೇಗೆ? ಇತ್ಯಾದಿಗಳ ಕೂಲಂಕುಷ ತನಿಖೆಗೆ ಕೈಗೊಂಡಿರುವ ಇಲಾಖೆ ಬಂಧಿತ ಕಿಶೋರ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಿಡುಗಡೆ ಮಾಡಲಾಗಿದ್ದು, ಈತನ ಕೈಗೆ ನೋಟು ಕಟ್ಟುಗಳು ಬರುವ ವೇಳೆಗೆ ಮೂರು ನಾಲ್ಕು ಕೈಬದಲಾಗಿರುತ್ತದೆ.
ಆ ಬದಲಾದ ಕಾಣದ ಕೈಗಳ ಪತ್ತೆಗೆ ಹೊರಟಿರುವ ತನಿಖಾ ಇಲಾಖೆಗಳು ಆರ್.ಬಿ.ಐ ಅಧಿಕಾರಿಗಳಿಂದ ಹಿಡಿದು, ಬ್ಯಾಂಕ್ ಅಧಿಕಾರಿಗಳವರೆಗೆ ಮಾಹಿತಿ ಕಲೆ ಹಾಕುವಲ್ಲಿ ತೊಡಗಿದೆ.
ಈಗ ವಶಪಡಿಸಿಕೊಂಡಿರುವ ನೋಟಿನ ಬಂಡಲುಗಳು ಕೇವಲ 2000 ರೂ. ನೋಟುಗಳ ಜೊತೆಗೆ 1000 ರೂ. ಮೊತ್ತದ 10 ರೂ. ನೋಟುಗಳೂ ಇವೆ.
ಸಾಮಾನ್ಯವಾಗಿ ಮುದ್ರಣಾಲಯಗಳಲ್ಲಿ ಮುದ್ರಣಗೊಂಡ ನೋಟುಗಳು 1000 ಸಂಖ್ಯೆಯ ಬಿಡಿ ನೋಟುಗಳನ್ನು ಒಂದು ಬಂಡಲ್ ಮಾಡಿ ಬ್ಯಾಂಕ್ ವಿತರಣಾ ಕೇಂದ್ರಗಳಿಗೆ ರವಾನೆ ಮಾಡಲಾಗುತ್ತದೆ. ಬ್ಯಾಂಕ್‌ಗಳು ಅವುಗಳನ್ನು ಬಿಚ್ಚಿ 100 ಬಿಡಿ ನೋಟುಗಳ ಬಂಡಲನ್ನು ಮಾ‌ಡಿ ತಮ್ಮ ಬ್ಯಾಂಕ್ ಮುದ್ರೆಯೊಂದಿಗೆ ಗ್ರಾಹಕರಿಗೆ ವಿತರಿಸುತ್ತದೆ. ಬ್ಯಾಂಕ್ ಶಾಖೆ ಹಾಗೂ ಎಟಿಎಂಗಳಿಗೂ 100 ಬಿಡಿ ನೋಟುಗಳ ಬಂಡಲುಗಳು ರವಾನೆಯಾಗುತ್ತವೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.