ರಾಷ್ಟ್ರೀಯ

ರದ್ದುಗೊಂಡ ಹಳೆ ನೋಟುಗಳಷ್ಟೇ ಹೊಸ ನೋಟುಗಳು ಬರುವುದಿಲ್ಲ: ಅರುಣ್ ಜೇಟ್ಲಿ

Pinterest LinkedIn Tumblr

arun jetlyನವದೆಹಲಿ: ರದ್ದುಗೊಳಿಸಲಾಗಿರುವ ಹಳೆಯ ನೋಟುಗಳಷ್ಟೇ (₹15.44 ಲಕ್ಷ ಕೋಟಿ) ಮೌಲ್ಯದ ಹೊಸ ನೋಟುಗಳನ್ನು ಚಲಾವಣೆಗೆ ತರುವುದಿಲ್ಲ ಎಂಬ ಸುಳಿವನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಶನಿವಾರ ನೀಡಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟದ (ಎಫ್‌ಐಸಿಸಿಐ) ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಅವರು, ‘ನೋಟುಗಳ ಕೊರತೆಯನ್ನು ಡಿಜಿಟಲ್‌ ಕರನ್ಸಿ ತುಂಬಲಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ಮುಂದೆಯೂ ಸಣ್ಣ ಪ್ರಮಾಣದಲ್ಲಿ ನೋಟುಗಳ ಚಲಾವಣೆ ಇದ್ದೇ ಇರುತ್ತದೆ. ಆದರೆ, ಹಿಂದೆ ಇದ್ದ ವ್ಯವಸ್ಥೆಗೆ ಹೋಲಿಸಿದರೆ ಮುಂದಿನ ದಿನಗಳಲ್ಲಿ ಇರಬಹುದಾದ ನಗದು ಕರೆನ್ಸಿಯ ಕೊರತೆಯನ್ನು ಡಿಜಿಟಲ್‌ ಕರೆನ್ಸಿ ತುಂಬುವಂತಾಗಬೇಕು ಎಂಬುದು ನೋಟು ರದ್ದತಿಯ ಪ್ರಮುಖ ಉದ್ದೇಶಗಳಲ್ಲೊಂದು’ ಎಂದಿದ್ದಾರೆ.

‘ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಈಗ ಹೆಚ್ಚು ಉತ್ತೇಜನ ಸಿಗುತ್ತಿದೆ. ಕಳೆದ ಐದು ವಾರಗಳಲ್ಲಿ ಈ ವ್ಯವಸ್ಥೆ ಶ್ಲಾಘನೀಯ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಸಂಸತ್ತಿನ ಒಂದು ವರ್ಗಕ್ಕೆ ಮಾತ್ರ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅರಿವಿಲ್ಲದಂತೆ ತೋರುತ್ತದೆ’ ಎಂದು ವಿರೋಧ ಪಕ್ಷಗಳನ್ನು ಅವರು ಪರೋಕ್ಷವಾಗಿ ಟೀಕಿಸಿದ್ದಾರೆ.

₹500 ಮತ್ತು ₹1,000 ಮುಖಬೆಲೆಯ ಹಳೆಯ ನೋಟುಗಳ ಚಲಾವಣೆ ರದ್ದುಗೊಳಿಸಿರುವುದು ‘ಕೆಚ್ಚೆದೆಯ ನಿರ್ಧಾರ’ ಎಂದು ಬಣ್ಣಿಸಿರುವ ಅವರು, ಇಂತಹ ನಿರ್ಧಾರ ತೆಗೆದುಕೊಳ್ಳುವ ಮತ್ತು ಪ್ರಯೋಗಕ್ಕೆ ಒಡ್ಡಿಕೊಳ್ಳುವ ಸಾಮರ್ಥ್ಯ ಭಾರತಕ್ಕೆ ಇರುವುದರಿಂದ ಈ ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಸರ್ಕಾರದ ಈ ನಿರ್ಧಾರವು ಭಾರತದಲ್ಲಿ ಹೊಸ ‘ಸಾಮಾನ್ಯ ಸ್ಥಿತಿ’ ನಿರ್ಮಾಣ ಮಾಡಲಿದೆ. ಅಲ್ಲದೇ, ತೆರಿಗೆ ವಂಚನೆ, ಕಪ್ಪು ಹಣ ಮತ್ತು ಅಪರಾಧ ಕೃತ್ಯಗಳಿಗೆ ಕಾರಣವಾಗಿದ್ದ ಹೆಚ್ಚು ನಗದು ಹರಿವಿನ ಅರ್ಥವ್ಯವಸ್ಥೆಯನ್ನು ತೊಡೆದುಹಾಕಲು ಇದು ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಹೊಸ ನೋಟುಗಳನ್ನು ಪೂರ್ಣ ಪ್ರಮಾಣದಲ್ಲಿ ಚಲಾವಣೆಗೆ ತರಲು ಹೆಚ್ಚು ಸಮಯ ಬೇಕಾಗದು. ಆರ್‌ಬಿಐ, ಶೀಘ್ರದಲ್ಲಿ ನೋಟುಗಳನ್ನು ಪ್ರತಿ ದಿನ ಬ್ಯಾಂಕಿಂಗ್‌ ಮತ್ತು ಅಂಚೆ ವ್ಯವಸ್ಥೆಗೆ ವಿತರಿಸಲಿದೆ’ ಎಂಬ ವಿಶ್ವಾಸವನ್ನು ಜೇಟ್ಲಿ ವ್ಯಕ್ತಪಡಿಸಿದ್ದಾರೆ.

**
ಭಾರತದಲ್ಲಿ 70 ವರ್ಷಗಳಿಂದ ಇದ್ದ ‘ಸಾಮಾನ್ಯ ಸ್ಥಿತಿ’ ಸ್ವೀಕಾರಕ್ಕೆ ಯೋಗ್ಯವಾಗಿರಲಿಲ್ಲ. ಹೊಸ ನೋಟುಗಳ ಚಲಾವಣೆ ಪೂರ್ಣಗೊಂಡ ಬಳಿಕ ದೇಶದಲ್ಲಿ ‘ಹೊಸ ವ್ಯವಸ್ಥೆ’ ನಿರ್ಮಾಣವಾಗಲಿದೆ
-ಅರುಣ್‌ ಜೇಟ್ಲಿ, ಕೇಂದ್ರ ಸಚಿವ

Comments are closed.