ಅಹಮದಾಬಾದ್: ಆದಾಯ ಘೊಷಣೆ ಯೋಜನೆ ಅಡಿಯಲ್ಲಿ 13,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಆದಾಯ ಘೊಷಿಸಿ, ಶೇಕಡಾ 25ರಷ್ಟು ಮೊತ್ತವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕಾದ ಹೊತ್ತಿನಲ್ಲಿ ಕಣ್ಮರೆಯಾಗಿ ಬಳಿಕ ಶನಿವಾರ ಸಂಜೆ ದಿಢೀರನೆ ಪ್ರತ್ಯಕ್ಷರಾಗಿದ್ದ ಉದ್ಯಮಿ ಮಹೇಶ ಷಹಾ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಆದಾಯ ತೆರಿಗೆ ಅಧಿಕಾರಿಗಳು ಷಹಾ ಹೇಳಿಕೆಗಳನ್ನು ನಿಯಮಾನುಸಾರ ದಾಖಲಿಸಿಕೊಂಡಿದ್ದಾರೆ.
ಹೇಳಿಕೆ ದಾಖಲಾತಿ ಬಳಿಕ ಷಹಾ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಷಹಾ ಅವರ ಕುಟುಂಬಕ್ಕೂ ರಕ್ಷಣೆ ಒದಗಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ವಿಮಲ್ ಮೀನಾ ಹೇಳಿದರು.
ಕಣ್ಮರೆಯಾಗಿದ್ದ ಷಹಾ ಅವರು ಶನಿವಾರ ಸಂಜೆ ಗುಜರಾತಿನ ಸ್ಥಳೀಯ ಈಟಿವಿ ಗುಜರಾತಿ ವಾಹಿನಿಯಲ್ಲಿ ಸಂದರ್ಶನದಲ್ಲಿ ಪ್ರತ್ಯಕ್ಷರಾಗಿ ‘ಆದಾಯ ಘೊಷಣೆ ಯೋಜನೆ ಅಡಿಯಲ್ಲಿ ತಾವು ಘೊಷಿಸಿರುವ ಹಣ ತಮಗೆ ಸೇರಿದ್ದಲ್ಲ. ರಾಜಕಾರಣಿಗಳು, ಬಾಬುಗಳು ಮತ್ತು ಬಿಲ್ಡರ್ಗಳು ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಸೇರಿದ್ದು’ ಎಂದು ಹೇಳಿದ್ದರು.
ಟಿವಿ ವಾಹಿನಿಯಲ್ಲಿ ಷಹಾ ಸಂದರ್ಶನ ಬಿತ್ತರವಾಗುತ್ತಿದ್ದಂತೆಯೇ ಸಂಭವಿಸಿದ ನಾಟಕೀಯ ತಿರುವಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಪೊಲೀಸರು ಟಿವಿ ವಾಹಿನಿಗೆ ನುಗ್ಗಿ ಷಹಾ ಅವರನ್ನು ಪ್ರಶ್ನಿಸುವ ಸಲುವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು.
ಇದಕ್ಕೆ ಮುನ್ನ ಶನಿವಾರ ಆದಾಯ ತೆರಿಗೆ ಅಧಿಕಾರಿಗಳು ಷಹಾ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದ್ದರು. ಕಳೆದ ಕೆಲ ಸಮಯದಿಂದ ಷಹಾ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ, ಆದರೆ ಅವರು ಬರುತ್ತಾರೆ ಮತ್ತು ತೆರಿಗೆ ಇಲಾಖೆಯವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ ಎಂದು ಷಹಾ ಕುಟುಂಬ ಸದಸ್ಯರು ಹೇಳಿದ್ದರು.