ರಾಷ್ಟ್ರೀಯ

ಒಆರ್ ಒಪಿ ಸಂಬಂಧಿ ಆತ್ಮಹತ್ಯೆ; ಕುಟುಂಬಸ್ಥರನ್ನು ಭೇಟಿ ಮಾಡಲು ಬಂದ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ

Pinterest LinkedIn Tumblr

rahul

ನವದೆಹಲಿ: ಒಆರ್ ಒಪಿ ಸಂಬಂಧಿ ಆತ್ಮಹತ್ಯೆಗೆ ಶರಣಾಗಿರುವ ಮಾಜಿ ಸೈನಿಕ ರಾಮ್ ಕಿಶನ್ ಗರೆವಾಲ್ ಅವರ ಕುಟುಂಬವನ್ನು ಭೇಟಿ ಮಾಡಲು ಆರ್ ಎಂಎಲ್ ಆಸ್ಪತ್ರೆ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಸ್ಪತ್ರೆಯ ಗೇಟ್ ಬಳಿಯೇ ತಡೆದ ದೆಹಲಿ ಪೊಲೀಸರು, ಮಾಜಿ ಸೈನಿಕನ ಕುಟುಂಬದ ಭೇಟಿಗೂ ಅವಕಾಶ ನೀಡಲಿಲ್ಲ.

ಆಸ್ಪತ್ರೆ ಆವರಣ ಪ್ರವೇಶಿಸುವುದಕ್ಕೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಒಂದು ಗೇಟಿನಿಂದ ಮತ್ತೊಂದು ಗೇಟ್ ಬಳಿ ತೆರಳಿ, ಅಲ್ಲಿಯೇ ಧರಣಿ ಮಾಡಲು ಮುಂದಾದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ದೆಹಲಿ ಉಪ ಪೊಲೀಸ್ ಆಯುಕ್ತ ರಾಜಕುಮಾರ್ ಖತ್ರಿ ಅವರು, ಇದು ಧರಣಿ ಮಾಡುವ ಸ್ಥಳವಲ್ಲ. ಹೀಗಾಗಿ ಧರಣಿ ಮಾಡದಂತೆ ಮನವಿ ಮಾಡಿದರು. ಆದರೂ ಧರಣಿ ಮುಂದುವರೆಸಿದ ರಾಹುಲ್ ಗಾಂಧಿ ದೆಹಲಿ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು.

ಈ ವೇಳೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಉಪಾಧ್ಯಕ್ಷ, ದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ನೋಡಿ. ನಮ್ಮ ಸೈನಿಕನ ಕುಟುಂಬದ ಭೇಟಿಗೆ ಅವಕಾಶ ನೀಡದಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದರು.

ಇದೊಂದು ರೀತಿಯ ಮನಸ್ಥಿತಿ, ಒಂದು ನಿರ್ಧಿಷ್ಟ ಮತ್ತು ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಇದಕ್ಕೆ ನಾನು ಪರಿಹಾರ ಕಂಡುಕೊಂಡಿದ್ದು, ಮೃತ ಮಾಜಿ ಸೈನಿಕನ ಕುಟುಂಬ ಆಸ್ಪತ್ರೆಯಿಂದ ಹೊರಬಂದು ತಮ್ಮನ್ನು ಭೇಟಿ ಮಾಡಲಿದೆ ಎಂದರು.

ಇದಕ್ಕೂ ಮುನ್ನ ಗರೆವಾಲ್ ಅವರ ಕುಟುಂಬವನ್ನು ಭೇಟಿ ಮಾಡಲು ಬಂದ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಯಾಗುವಲ್ಲಿ ವಿಳಂಬವಾಗುತ್ತಿರುವುದರಿಂದ ಬೇಸತ್ತು ರಾಮ್ ಕಿಶನ್ ಗರೇವಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

Comments are closed.