ನವದೆಹಲಿ: ಈ ವರ್ಷದ ದೀಪಾವಳಿ ಹಬ್ಬವನ್ನು ವರ್ಷಪೂರ್ತಿ ನಮ್ಮನ್ನು ಕಾಯುವ ಸೇನಾ ಯೋಧರಿಗೆ ಸಮರ್ಪಿಸೋಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 25ನೇ ಸರಣಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ನಂತರ ಯೋಧರ ತ್ಯಾಗ ಹಾಗೂ ಬಲಿದಾನದ ಕುರಿತಂತೆ ಕೊಂಡಾಡಿರುವ ಅವರು, ದೇಶದ ಜವಾನರು ಕರ್ತವ್ಯದಲ್ಲಿದ್ದು ನಮ್ಮನ್ನು ರಕ್ಷಿಸುತ್ತಿದ್ದಾರೆ. ಹೀಗಾಗಿ ನಮಗೆ ಸಂತೋಷದಿಂದ ದೀಪಾವಳಿ ಆಚರಿಸಲು ಸಾಧ್ಯವಾಗುತ್ತಿದೆ. ಇದಕ್ಕೆ ನಾವು ನಮ್ಮ ಸೇನಾ ಯೋಧರಿಗೆ ಧನ್ಯವಾದ ಹೇಳಬೇಕು ಎಂದು ಹೇಳಿದ್ದಾರೆ.
ಭಾಷಣದ ಮುಖ್ಯಾಂಶ…
ನಮ್ಮನ್ನು ರಕ್ಷಿಸುತ್ತಿರುವ ಭದ್ರತಾ ಪಡೆಗಳು ಮತ್ತು ಜವಾನರಿಗೆ ಬೆಂಬಲ, ಪ್ರೀತಿ ತೋರಿಸುತ್ತಿರುವ ನಾಗರಿಕರಿಗೆ ನನ್ನ ಕೃತಜ್ಞತೆಗಳು. ಈ ವರ್ಷದ ದೀಪಾವಳಿ ಅವರಿಗೆ ಸಮರ್ಪಣೆ.
-ದೀಪಾವಳಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಆಚರಿಸುತ್ತಾರೆ. ಬೆಳಕಿನ ಹಬ್ಬ ದೀಪಾವಳಿ ಜನರನ್ನು ಬೆಸೆಯುತ್ತದೆ.
– ಕತ್ತಲೆಯನ್ನು ಹೋಗಲಾಡಿಸಿ ಬೆಳಕು ಮೂಡಿಸುವ ಹಬ್ಬವೇ ದೀಪಾವಳಿ. ಈ ಹಬ್ಬ ಸ್ವಚ್ಛತೆಯನ್ನು ಕೂಡ ಸೂಚಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಅದರ ಜೊತೆಗೆ ನಮ್ಮ ಸುತ್ತಮುತ್ತಲೂ ಕೂಡ ಶುಚಿಯಾಗಿಟ್ಟುಕೊಳ್ಳಬೇಕು.
– ಭಾರತದ ಕಲೆ, ಸಂಸ್ಕೃತಿ, ಹಬ್ಬಗಳು ನಮ್ಮ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ ಭೂಮಿ, ಪಕ್ಷಿ, ಪ್ರಾಣಿ, ನದಿ, ಗುಡ್ಡ-ಬೆಟ್ಟಗಳ ಬಗ್ಗೆ ನಮ್ಮ ಜವಾಬ್ದಾರಿ ಬಗ್ಗೆ ತಿಳಿಸುತ್ತದೆ.
-ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಹೆಸರಿನಲ್ಲಿ ಹಣತೆ ಹಚ್ಚಿ.
-ಐಟಿಬಿಪಿ, ಅಸ್ಸಾಂ ರೈಫಲ್ಸ್, ಸಿಆರ್ ಪಿಎಫ್, ಬಿಎಸ್ಎಫ್, ನೌಕಾಪಡೆ, ಸೇನೆ ಮತ್ತು ಕರಾವಳಿ ಪಡೆಯ ಸೈನಿಕರ ಉತ್ಸಾಹ, ಧೈರ್ಯ, ಷರತ್ತುಗಳಿಲ್ಲದ ತ್ಯಾಗಗಳನ್ನು ಕೊಂಡಾಡಿದ ಪ್ರಧಾನಿ.
– ಬಯಲು ಶೌಚ ಮುಕ್ತ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ. ಕೇರಳ ರಾಜ್ಯ ಕೂಡ ಸದ್ಯದಲ್ಲಿಯೇ ಬಯಲು ಶೌಚ ಮುಕ್ತವಾಗುವ ಹಾದಿಯಲ್ಲಿದೆ.
-ತಮ್ಮ ರಾಜ್ಯವನ್ನು ಬಯಲು ಶೌಚ ಮುಕ್ತಗೊಳಿಸಲು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಕೇರಳದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ.