ರಾಷ್ಟ್ರೀಯ

‘ಎ ದಿಲ್ ಹೈ ಮುಷ್ಕಿಲ್’ ಚಿತ್ರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಪಕ್ಷಗಳಿಗೆ ತೀಕ್ಷ್ಣ ತಿರುಗೇಟು ನೀಡಿದ ಭಾರತೀಯ ಸೇನೆ

Pinterest LinkedIn Tumblr

raj

ನವದೆಹಲಿ: ಪಾಕಿಸ್ತಾನ ನಟರನ್ನು ಹೊಂದಿರುವ ಎ ದಿಲ್ ಹೈ ಮುಷ್ಕಿಲ್ ಚಿತ್ರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ತೀಕ್ಷ್ಣ ತಿರುಗೇಟು ನೀಡಿರುವ ಭಾರತೀಯ ಸೇನೆ ಚಿತ್ರತಂಡ ನೀಡಲಿಚ್ಛಿಸಿದ್ದ 5 ಕೋಟಿ ಹಣವನ್ನು ತಿರಸ್ಕರಿಸಿದೆ.

ಪಾಕಿಸ್ತಾನದ ನಟ ಫವಾದ್ ಖಾನ್ ಅಭಿನಯದ ಕರಣ್ ಜೋಹರ್ ಅವರ ಎ ದಿಲ್ ಹೈ ಮುಷ್ಕಿಲ್ ಚಿತ್ರಕ್ಕೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಬಹಿಷ್ಕಾರ ಹಾಕಿ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ ಬಳಿಕ ಉಂಟಾದ ವಿವಾದ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಎಂಎನ್ ಎಸ್ ಹಾಗೂ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡುವೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಸಂಧಾನವಾಗಿ, ಸೇನೆಗೆ 5 ಕೋಟಿ ನೀಡುವ ಒಪ್ಪಂದಕ್ಕೆ ನಿರ್ಮಾಪಕರು ಒಪ್ಪಿದ ಹಿನ್ನಲೆಯಲ್ಲಿ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡಲಾಗಿತ್ತು.

ಆದರೆ ಸೇನೆಯನ್ನು ಮುಂದಿಟ್ಟುಕೊಂಡು ಎಂಎನ್ಎಸ್ ಮಾಡುತ್ತಿರುವ ರಾಜಕೀಯದಿಂದ ಬೇಸರ ವ್ಯಕ್ತಪಡಿಸಿರುವ ಭಾರತೀಯ ಸೇನೆ, ಇತ್ತೀಚಿನ ಬೆಳವಣಿಗೆಗಳು ನಿಜಕ್ಕೂ ಬೇಸರತರಿಸಿದೆ. ಭಾರತೀಯ ಸೇನೆ ಕಲ್ಯಾಣ ನಿಧಿಗೆ ಯಾರೇ ಆದರೂ ವೈಯಕ್ತಿಕವಾಗಿ ಸ್ವಇಚ್ಛೆಯಿಂದ ಮತ್ತು ಪ್ರೀತಿಯಿಂದ ಹಣ ನೀಡಬೇಕೇ ಹೊರತು ಒಬ್ಬರನ್ನು ಬೆದರಿಸಿ ಅಥವಾ ಅವರ ಮೇಲೆ ಒತ್ತಡ ಹೇರಿ ನೀಡುವ ಹಣ ನಮಗೆ ಬೇಕಿಲ್ಲ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇನೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಇತ್ತೀಚಿನ ಕೆಲ ಬೆಳವಣಿಗೆಗಳು ನಿಜಕ್ಕೂ ನೋವು ತರಿಸಿದೆ. ರಾಜಕೀಯದ ಉದ್ದೇಶಕ್ಕೆ ಸೇನೆಯನ್ನು ಎಳೆದು ತಂದು ತಮ್ಮ ಸ್ವಹಿತಾಸಕ್ತಿ ಸಾಧನೆ ಮಾಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇಂತಹ ಬೆಳವಣಿಗಳನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ನಿವೃತ್ತ ವಾಯು ಸೇನೆ ಅಧಿಕಾರಿ ಮಾರ್ಷಲ್ ಮನಮೋಹನ್ ಬಹದ್ದೂರ್ ಹೇಳಿದ್ದಾರೆ.

Comments are closed.