ಅಮೃತಸರ: ಭಾರತ ವಿರೋಧಿ ಸಂದೇಶ ಇರುವ ಚೀಟಿ ಹೊತ್ತು ಬಂದಿದ್ದ ಪಾರಿವಾಳಕ್ಕೆ ತನಿಖೆ ಮುಗಿಯುವವರಿಗೂ ಮುಕ್ತಿ ಸಿಗುವುದಿಲ್ಲ. ಅದಕ್ಕೆ ಜೈಲುವಾಸವೇ ಗತಿ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 1 ರಂದು ಪಂಜಾಬ್ನ ಪಠಾಣ್ಕೋಟ್ನ ಗಡಿ ಭಾಗದಲ್ಲಿ ಒಂದು ಪಾರಿವಾಳ ಪತ್ತೆಯಾಗಿತ್ತು. ಅದರ ಕಾಲಿಗೆ ಕಟ್ಟಿದ್ದ ಚೀಟಿಯಲ್ಲಿ ಭಾರತಕ್ಕೆ ಎಚ್ಚರಿಕೆ ನೀಡುವ ಸಂದೇಶವನ್ನು ಉರ್ದುವಿನಲ್ಲಿ ಬರೆಯಲಾಗಿತ್ತು. ‘ಮೋದಿ ಜಿ ನಾವು 1971ರಲ್ಲಿ ಇದ್ದಂತೆ ಇಲ್ಲ, ಜೈಷ್ ಎ ಮೊಹಮ್ಮದ್’ ಎಂದು ಸಂದೇಶವಿತ್ತು. ಈ ಪಾರಿವಾಳವನ್ನು ಬಿಎಸ್ಎಫ್ ಯೋಧರು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅಂದಿನಿಂದಲೂ ಆ ಪಾರಿವಾಳ ಪೊಲೀಸರ ವಶದಲ್ಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ವಿಧದಲ್ಲಿ ತನಿಖೆ ನಡೆಸಬೇಕು ಎಂದು ಮೇಲಾಧಿಕಾರಿಗಳು ಮತ್ತು ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಹಾಗಾಗಿ ಪೊಲೀಸರು 300 ರೂ. ಕೊಟ್ಟು ವಿಶೇಷ ಪಂಜರ ತಂದು ಅದರಲ್ಲಿ ಪಾರಿವಾಳವನ್ನು ಕೂಡಿ ಹಾಕಿದ್ದಾರೆ, ಜತೆಗೆ ಅದಕ್ಕೆ ಆಹಾರ, ನೀರು ಒದಗಿಸಿ ಆರೈಕೆ ಮಾಡುತ್ತಿದ್ದಾರೆ.
ಈ ಪಾರಿವಾಳದ ಕುರಿತು ಮಾಧ್ಯಮಗಳಲ್ಲಿ ದಿನಕ್ಕೊಂದು ವರದಿ ಪ್ರಕಟವಾಗುತ್ತಿದೆ. ಹಾಗಾಗಿ ಇದನ್ನು ಈಗಲೇ ಬಿಟ್ಟು ಕಳುಹಿಸಲು ಸಾಧ್ಯವಿಲ್ಲ. ತನಿಖೆ ಮುಗಿದ ಬಳಿಕವಷ್ಟೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಪಾರಿವಾಳದ ಒಳಗೆ ಸಿಮ್ ಕಾರ್ಡ್ ಅಡಗಿಸಿ ಇಡಲಾಗಿದೆಯೇ ಅಥವಾ ಬೇರಾವುದೇ ವಸ್ತುಗಳಿವೆಯೇ ಎಂಬುದನ್ನು ತಿಳಿಯಬೇಕಿದೆ. ಹಾಗಾಗಿ ಪಾರಿವಾಳವನ್ನು ಸ್ಕ್ಯಾನಿಂಗ್ ಮಾಡಿಸಬೇಕೆಂದಿದ್ದೇವೆ. ತನಿಖೆ ಮುಗಿಯುವವರೆಗೂ ನಾವು ಪಾರಿವಾಳವನ್ನು ಜೋಪಾನವಾಗಿ ಕಾಪಾಡಬೇಕಿದೆ. ಇದು ದೇಶ ವಿರೋಧಿ ಸಂದೇಶ ಹೊತ್ತು ಬಂದ ಆರೋಪ ಎದುರಿಸುತ್ತಿದೆ. ಆದರೆ ಪಾರಿವಾಳಕ್ಕೆ ತಾನು ಎಂಥಹ ತಪ್ಪು ಮಾಡಿದ್ದೇನೆ ಎಂಬುದೇ ತಿಳಿದಿಲ್ಲ ಎಂದು ಪೊಲೀಸ್ ಆಧಿಕಾರಿಯೊಬ್ಬರು ತಿಳಿಸುತ್ತಾರೆ.