
ರಾಂಚಿ : ಇತ್ತೀಚಿಗೆ ಆಸ್ಪತ್ರೆ ಸಿಬ್ಬಂದಿ ರೋಗಿಗಳೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿವೆ. ಇಂತಹದ್ದೇ ಒಂದು ಘಟನೆ ರಾಂಚಿಯಲ್ಲಿ ನಡೆದಿದ್ದು, ತಟ್ಟೆಗಳಿಲ್ಲವೆಂದು ರೋಗಿಯೊಬ್ಬರಿಗೆ ನೆಲದ ಮೇಲೆ ಊಟ ಹಾಕಿದ್ದಾರೆ.
300 ಕೋಟಿ ರೂ. ವಾರ್ಷಿಕ ಬಜೆಟ್ ಹೊಂದಿರುವ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ರಾಜ್ಯದ ಬೃಹತ್ ಸರಕಾರಿ ಅಸ್ಪತ್ರೆಯಲ್ಲಿ ಒಳ ರೋಗಿ ಬಡ ಮಹಿಳೆಗೆ ತಟ್ಟೆ ಇಲ್ಲದ ಕಾರಣಕ್ಕೆ ನೆಲದಲ್ಲೇ ಊಟ ಬಡಿಸಿ ಬಲವಂತದಿಂದ ಉಣ್ಣುವಂತೆ ಮಾಡಿದ ಅತ್ಯಮಾನುಷ ಘಟನೆ ವರದಿಯಾಗಿದೆ. ದೈನಿಕ್ ಭಾಸ್ಕರ್ ಪ್ರಕಟಿಸಿರುವ ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.
ನಿನ್ನೆ ಬುಧವಾರ ರಾಂಚಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ಸ್ನ ರಾಜ್ಯದ ಅತೀ ದೊಡ್ಡ ಸರಕಾರಿ ಆಸ್ಪತ್ರೆಯ ಅಡುಗೆಮನೆ ಸಿಬಂದಿಗಳು ಆರ್ತೋಪೆಡಿಕ್ ವಾರ್ಡ್ನ ಒಳರೋಗಿ ಮಹಿಳೆ, ಪಾಲ್ಮತಿ ದೇವಿಗೆ “ಊಟ ಬಡಿಸಲು ನಿನ್ನ ಬಳಿ ತಟ್ಟೆ ಇಲ್ಲವೇ?’ ಎಂದು ಪ್ರಶ್ನಿಸಿದಾಗ ಆಕೆ ಇಲ್ಲವೆಂದು ಹೇಳಿದಳು. ಆಸ್ಪತ್ರೆಯಲ್ಲಿರುವ ತಟ್ಟೆಯನ್ನು ತನಗೆ ಕೊಡಿಸುವಂತೆ ಆಕೆ ಬೇಡಿಕೊಂಡಳು.
ಆಗ ಸಿಟ್ಟಿಗೆದ್ದ ಸಿಬಂದಿಗಳು, “ಆಸ್ಪತ್ರೆಯಲ್ಲಿ ಊಟದ ತಟ್ಟೆಗಳಿಲ್ಲ; ನೆಲದಲ್ಲೇ ನಿನಗೆ ಊಟ ಬಡಿಸುತ್ತೇವೆ; ನೆಲವನ್ನು ಸ್ವಚ್ಛ ಮಾಡಿಕೋ’ ಎಂದು ಗುಡುಗಿದರು.
ಒಂದು ಕೈ ಮುರಿದುಕೊಂಡು ಬ್ಯಾಂಡೇಜ್ ಹಾಕಲ್ಪಟ್ಟಿದ್ದ ಪಾಲ್ಮತಿ ದೇವಿ, ತನ್ನ ಇನ್ನೊಂದು ಕೈಯಿಂದ ಕಷ್ಟಪಟ್ಟು ನೆಲವನ್ನು ಸ್ವಚ್ಛ ಪಡಿಸಿಕೊಂಡಳು. ಆಸ್ಪತ್ರೆ ಸಿಬಂದಿಗಳು ಆಕೆಗೆ ಅನ್ನ, ಸಾಂಬಾರು, ಪಲ್ಯ ಎಲ್ಲವನ್ನೂ ಆಕೆಯ ಮುಂದೆ ನೆಲದಲ್ಲೇ ಸುರಿದರು. ಮತ್ತು ಬಲವಂತದಿಂದ ಅದನ್ನು ಉಣ್ಣುವಂತೆ ಮಾಡಿದರು.
ಪಾಲ್ಮತಿ ದೇವಿಗೆ ಆಸ್ಪತ್ರೆ ಸಿಬಂದಿಗಳು ಹೀಗೆ ನೆಲದಲ್ಲೇ ಊಟ ಬಡಿಸಿದ ಫೋಟೋವನ್ನು ದೈನಿಕ್ ಭಾಸ್ಕರ್ ಸೆರೆ ಹಿಡಿದು ಪ್ರಕಟಿಸಿದಾಗ ಆಸ್ಪತ್ರೆ ಅಧಿಕಾರಿಗಳಿಗೆ ಬಿಸಿ ಮುಟ್ಟಿತು.
“ನಮ್ಮಲ್ಲಿ ಹೀಗೆ ಸಾಮಾನ್ಯವಾಗಿ ಎಂದೂ ನಡೆಯುವುದಿಲ್ಲ; ನಾವೀಗ ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದೇವೆ. ನೆಲದಲ್ಲೇ ಊಟ ಬಡಿಸಿದವರಿಗೆ ಮತ್ತು ಬಲವಂತವಾಗಿ ಆಕೆ ಅದನ್ನು ತಿನ್ನುವಂತೆ ಮಾಡಿದವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಆಸ್ಪತ್ರೆಯ ನಿರ್ದೇಶಕ ಬಿ ಎಲ್ ಶೇರ್ವಾಲ್ ಹೇಳಿದ್ದಾರೆ.
ಒಡಿಶಾದ ಕಾಲಹಂಡಿಯಲ್ಲಿ ಅಂಬುಲೆನ್ಸ್ಗೆ ಹಣ ಪಾವತಿಸಲಾಗದ ದಾನಾ ಮಾಂಜಿ ಎಂಬ ಬುಡಕಟ್ಟು ಬಡಪಾಯಿ ತನ್ನ ಪತ್ನಿಯ ಹೆಣವನ್ನು ಹತ್ತು ಕಿ.ಮೀ. ದೂರದ ವರೆಗೂ ತನ್ನ ಹೆಗಲ ಮೇಲೆ ಹೊತ್ತೂಯ್ದ ಹೃದಯವಿದ್ರಾವಕ ಘಟನೆಯ ಬಳಿಕ ಜಾರ್ಖಂಡ್ನಲ್ಲಿ ನ ಸರಕಾರಿ ಆಸ್ಪತ್ರೆಗಳ ದುಸ್ಥಿತಿ, ಬಡ ರೋಗಿಗಳನ್ನು ನಡೆಸಿಕೊಳ್ಳುತ್ತಿರುವ ಬಗೆ ಇತ್ಯಾದಿಗಳ ಬಗ್ಗೆ ಮಾಧ್ಯಮಗಳು ಕಣ್ಗಾವಲು ಇರಿಸಿವೆ.
ಅಂತೆಯೇ ರಾಂಚಿಯ ಬೃಹತ್ ಸರಕಾರಿ ಆಸ್ಪತ್ರೆಯಲ್ಲಿ ಸಿಬಂದಿಗಳು ಬಡ ಮಹಿಳಾ ಒಳರೋಗಿಗೆ ನೆಲದಲ್ಲೇ ಊಟ ಬಡಿಸಿ ಬಲವಂತದಿಂದ ಆಕೆ ಅದನ್ನು ಉಣ್ಣುವಂತೆ ಮಾಡಿದ ಘಟನೆಯ ಫೋಟೋ ಪ್ರಕಟಿಸಿ ಸರಕಾರಕ್ಕೆ ಬಿಸಿ ಮುಟ್ಟಿಸಿದೆ.
Comments are closed.