ಅಂತರಾಷ್ಟ್ರೀಯ

ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಪಾಕ್ ಗೆ ಭಾರತ-ಆಫ್ಘನ್ ತಾಕೀತು

Pinterest LinkedIn Tumblr

india-afganistan

ನವದೆಹಲಿ: ಪಾಕಿಸ್ತಾನಕ್ಕೆ ನೀಡಿದ ಕಟು ಸಂದೇಶದಲ್ಲಿ ಭಾರತ, ಭಯೋತ್ಪಾದನೆಗೆ ಮತ್ತು ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವವರಿಗೆ ಯಾವುದೇ ರೀತಿಯ ಬೆಂಬಲ ನೀಡಬಾರದೆಂದು ಭಾರತ ಮತ್ತು ಆಫ್ಘಾನಿಸ್ತಾನ ಕರೆ ನೀಡಿವೆ. ಅಲ್ಲದೆ ತನ್ನ ರಾಜಕೀಯ ಉದ್ದೇಶವನ್ನು ಸಾಧಿಸಲು ಭಯೋತ್ಪಾದನೆಯನ್ನು ಸತತವಾಗಿ ಬಳಸುವ ದೇಶದ ಬಗ್ಗೆ ಅವು ತೀವ್ರ ಕಳವಳ ವ್ಯಕ್ತಪಡಿಸಿವೆ.
ಭಾರತ ಪ್ರವಾಸದಲ್ಲಿರುವ ಆಫ್ಘನ್ ಅಧ್ಯಕ್ಷ ಆಶ್ರಫ್ ಘನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. ಭಾರತ-ಆಫ್ಘನಿಸ್ತಾನ ಕಾರ್ಯತಂತ್ರ ಸಹಭಾಗಿತ್ವ ಒಪ್ಪಂದದಲ್ಲಿ ಊಹಿಸಿದಂತೆ, ಉಭಯ ನಾಯಕರು ಭಯೋತ್ಪಾದನೆಯನ್ನು ಮಟ್ಟ ಹಾಕಲು ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಬಲಪಡಿಸುವ ಕುರಿತು ಒಮ್ಮತದ ಅಭಿಪ್ರಾಯ ತಳೆದರು.
ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಎರಡೂ ದೇಶಗಳ ನಿಯೋಗ ಮಟ್ಟದ ಮಾತುಕತೆ ನಂತರ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸುಮಾರು ಒಂದು ಶತಕೋಟಿ ಡಾಲರ್ ಹಣವನ್ನು ಭಾರತ ಆಫ್ಘನಿಸ್ತಾನದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಕೌಶಾಲಾಭಿವೃದ್ಧಿ, ಮಹಿಳಾ ಅಭಿವೃದ್ಧಿ, ಇಂಧನ, ಮೂಲಭೂತ ಸೌಕರ್ಯ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಅಭಿವೃದ್ಧಿಗೆ ಮಂಜೂರು ಮಾಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಭಯ ನಾಯಕರು, ಕೈವಶಕ್ಕೆ ತೆಗೆದುಕೊಳ್ಳುವ ಒಪ್ಪಂದ, ಬಾಹ್ಯಾಕಾಶವನ್ನು ಶಾಂತಿಯುತವಾಗಿ ಬಳಸುವಲ್ಲಿ ಸಹಕಾರಕ್ಕೆ ತಿಳುವಳಿಕೆ ಒಪ್ಪಂದ ಹಾಗೂ ನಾಗರಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಸಹಕಾರಗಳಿಗೆ ಸಹಿ ಹಾಕಿದರು.
ಎರಡೂ ದೇಶಗಳ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ ನಾಯಕರು ಭಯೋತ್ಪಾದನೆ ಚಟುವಟಿಕೆ ಮಿತಿಮೀರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರಲ್ಲದೆ ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಭಯೋತ್ಪಾದಕ ಚಟುವಟಿಕೆಗಳಿಗೆ ಕೆಲವು ದೇಶಗಳು ಸಹಕಾರ ನೀಡುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
”ಭಯೋತ್ಪಾದನೆ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ಬಹುದೊಡ್ಡ ಅಡ್ಡಿಯಾಗಿದೆ ಎಂದು ಇಬ್ಬರೂ ತೀರ್ಮಾನಕ್ಕೆ ಬಂದಿದ್ದಾರೆ” ಎಂದು ಜಂಟಿ ಹೇಳಿಕೆ ತಿಳಿಸಿದ್ದು, ಪಾಕಿಸ್ತಾನವನ್ನು ನೇರವಾಗಿ ಹೆಸರಿಸದೆ ಒಂದು ದೇಶ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದ್ದಾರೆ ಎಂದಿದೆ.
ಯಾವುದೇ ತಾರತಮ್ಯ ತೋರದೆ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಹೋಗಲಾಡಿಸಲು ಶ್ರಮಿಸುವುದು ಸೂಕ್ತ ಎಂದು ಹೇಳಿರುವ ನಾಯಕರು ಆಫ್ಘಾನಿಸ್ತಾನ ಮತ್ತು ಭಾರತವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸುವವರಿಗೆ ಉತ್ತೇಜನ ನೀಡುವ ದೇಶಕ್ಕೆ ಯಾವುದೇ ರೀತಿಯ ಸಹಕಾರ ನೀಡಬಾರದೆಂಬ ತೀರ್ಮಾನಕ್ಕೆ ನಾಯಕರು ಬಂದರು.
ವಿಶ್ವ ಗುಣಮಟ್ಟದ ಮತ್ತು ಸುಲಭವಾಗಿ ಕೈಗೆಟಕುವ ದರದ ಔಷಧಗಳನ್ನು ಮತ್ತು ಪರಸ್ಪರ ಮಾತುಕತೆ ಮೂಲಕ ಸೌರ ಶಕ್ತಿ ಬಳಕೆಗೆ ನೆರವು ನೀಡುವುದಾಗಿ ಮತ್ತು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಆಫ್ಘಾನಿಸ್ತಾನ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡಲು ಭಾರತ ಸರ್ಕಾರ ಸದಾ ಸಿದ್ದವಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ತಿಂಗಳಾಂತ್ಯಕ್ಕೆ ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಭಾರತ-ಅಮೆರಿಕ-ಆಫ್ಘಾನಿಸ್ತಾನ ಸಮಾಲೋಚನೆ ಸಭೆ ಆರಂಭವಾಗುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.

Comments are closed.