
ಪುಣೆ: ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಸಚಿವರು ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ಶೈಕ್ಷಣಿಕ ವರ್ಷದಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಗಣಿತ ಹಾಗೂ ಆಂಗ್ಲ ಭಾಷೆ ಐಚ್ಛಿಕ ವಿಷಯಗಳಾಗಿರಲಿವೆ.
ಈ ಕುರಿತು ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾಬ್ಡೆ ಮಾಹಿತಿ ನೀಡಿದ್ದು ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಆಂಗ್ಲ ವಿಷಯಗಳನ್ನು ಕಡ್ಡಾಯ ವಿಷಯಗಳ ಪಟ್ಟಿಯಿಂದ ಹೊರಗಿಡಲಾಗುವುದು ಎಂದಿದ್ದಾರೆ. ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ಪರಿಶೀಲಿಸಿದ ಸಚಿವರಿಗೆ ಈ ಎರಡು ವಿಷಯಗಳಲ್ಲಿ ಕಡಿಮೆ ಅಂಕ ಗಳಿಸಿರುವುದಕ್ಕೆ ಅಥವಾ ಅನುತ್ತೀರ್ಣಗೊಂಡಿರುವ ಕಾರಣಕ್ಕೆ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೇಲಿನ ಒತ್ತಡ ತಗ್ಗಿಸಲು ಈ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಆದರೆ ಶಿಕ್ಷಣ ತಜ್ಞರು ಮಹಾರಾಷ್ಟ್ರ ಸಚಿವರ ಕ್ರಮಕ್ಕೆ ಆತಂಕ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ, ಸ್ಪರ್ಧಾತ್ಮಕ ಯುಗಕ್ಕೆ ಅತ್ಯಗತ್ಯವಾಗಿರುವ ಗಣಿತ ವಿಷಯ ಹಾಗೂ ಆಂಗ್ಲ ಭಾಷೆಯನ್ನು ಐಚ್ಛಿಕಗೊಳಿಸುವುದು ಸೂಕ್ತ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಂಗ್ಲ ಮತ್ತು ಗಣಿತ ಗಳನ್ನು ಐಚ್ಛಿಕ ವಿಷಯಗಳಾಗಿಸಿ ಅದರ ಬದಲು ಕೌಶಲ್ಯ ಆಧಾರಿತ ವಿಷಯಗಳನ್ನು ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದು ಶಿಕ್ಷಣ ಸಚಿವರ ಉದ್ದೇಶವಾಗಿದೆ. ಆದರೆ ಮಹಾ ಶಿಕ್ಷಣ ಸಚಿವರ ಪ್ರಸ್ತಾವನೆಗೆ ಶಿಕ್ಷಣ ತಜ್ಞರಲ್ಲೇ ಎರಡು ಬಣಗಳಾಗಿದ್ದು, ಒಂದಷ್ಟು ಶಿಕ್ಷಣ ತಜ್ಞರು ಶಿಕ್ಷಣ ಸಚಿವರ ಪ್ರಸ್ತಾವನೆಯನ್ನು ಸ್ವಾಗತಿಸಿದ್ದರೆ, ಮತ್ತೊಂದಷ್ಟು ಶಿಕ್ಷಣ ತಜ್ಞರು ವಿರೋಧಿಸಿದ್ದಾರೆ. ಆದರೆ ಶಿಕ್ಷಣ ಸಚಿವರದ್ದು ಪ್ರಸ್ತಾವನೆಯಷ್ಟೇ ಆಗಿದ್ದು ಈ ಪ್ರಸ್ತಾವನೆ ಬಗ್ಗೆ ನಿರ್ಧಾರ ಕೈಗೊಳ್ಳಲು ಶಿಕ್ಷಣ ತಜ್ಞರ ಸಮಿತಿಯನ್ನು ನೇಮಕ ಮಾಡಿ, ಸಮಿತಿಯ ಶಿಫಾರಸ್ಸಿನ ಬಳಿಕ ಅಂತಿಮ ನಿರ್ಧಾರ ಹೊರಬರಲಿದೆ.
Comments are closed.