ಲಕ್ನೋ: 2013ರಲ್ಲಿ ನಡೆದ ಮುಝಪ್ಪರ್‌ನಗರ ದಂಗೆಯ ಆರೋಪಿಗಳಲ್ಲೊಬ್ಬರಾಗಿರುವ, ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಿಜೆಪಿ ಶಾಸಕ ಸಂಗೀತ್ ಸೋಮ್ ಉತ್ತರ ಪ್ರದೇಶ ಚುನಾವಣೆಯನ್ನು ಹಿಂದೂಸ್ತಾನ ಮತ್ತು ಪಾಕಿಸ್ತಾನದ ನಡುವಿನ ಕದನ ಎಂದು ವ್ಯಾಖ್ಯಾನಿಸಿದ್ದಾರೆ.
ಬುಧವಾರ ಮೀರತ್‌ನಲ್ಲಿ ಪಕ್ಷದ ಬೆಂಬಲಿಗರ ಜತೆ ಸಭೆ ನಡೆಸಿದ ಸೋಮ್ ಈ ಮಾತುಗಳನ್ನಾಡಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತನ್ನನ್ನು ಹಿಂದೂಸ್ತಾನ ಎಂದು ಕರೆದುಕೊಂಡು ಮತ್ತು ಪ್ರತಿಸ್ಪರ್ಧಿಗಳನ್ನು ಪಾಕಿಸ್ತಾನ ಎಂದು ಬಣ್ಣಿಸಿರುವ ಸೋಮ್ ವಿರುದ್ಧ ಕಿಡಿಕಾರಿರುವ ಸಮಾಜವಾದಿ ಪಕ್ಷದ ನಾಯಕ ಅತುಲ್ ಪ್ರಧಾನ್, ಈ ಹೇಳಿಕೆ ವಿರುದ್ಧ ನಾನು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಮತ್ತೆ ದಂಗೆಯನ್ನು ಹುಟ್ಟುಹಾಕಲು ಸೋಮ್ ಸಿದ್ಧತೆ ನಡೆಸಿದ್ದಾನೆ ಎಂದು ಗುಡುಗಿದ್ದಾರೆ. ಕಳೆದ ವಿಧಾನಸಬಾ ಚುನಾವಣೆಯಲ್ಲಿ ಪ್ರಧಾನ್ ಸೋಮ್ ವಿರುದ್ಧ ಸೋತಿದ್ದರು.
2013ರಲ್ಲಿ ನಡೆದ ಮುಜಫ್ಪರ್‌ನಗರ ದಂಗೆಯಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ದಂಗೆಯ ಹಿಂದೆ ಸೋಮ್ ಪಾತ್ರವಿರುವ ಆರೋಪವಿದೆ. ಆದರೆ ಈ ಆರೋಪವನ್ನು ಸೋಮ್ ನಿರಾಕರಿಸುತ್ತಾರೆ.
Comments are closed.