ರಾಷ್ಟ್ರೀಯ

ಪೊಲೀಸ್ ವಶದಲ್ಲಿದ್ದ ದಲಿತ ಸಾವು; ಇಡೀ ಪೊಲೀಸ್ ಠಾಣೆಯೇ ಅಮಾನತು

Pinterest LinkedIn Tumblr

jailಕಾನ್ಪುರ (ಪಿಟಿಐ): ಪೊಲೀಸರ ವಶದಲ್ಲಿದ್ದ 26ರ ಹರೆಯದ ದಲಿತ ವ್ಯಕ್ತಿಯೊಬ್ಬ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಪೊಲೀಸರನ್ನು ಅಮಾನತು ಮಾಡಲಾಗಿದೆ.

ಶಿವ್ ಕಾತ್ರಾ ಗ್ರಾಮದ ನಿವಾಸಿ ಕಮಲ್ ವಾಲ್ಮೀಕಿ ಎಂಬಾತನ ಮೃತದೇಹ ಆಶಿರ್ವಾನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯಾಹ್ನ ನಿಗೂಢ ರೀತಿಯಲ್ಲಿ ಪತ್ತೆಯಾಗಿತ್ತು.
ದರೋಡೆ ಪ್ರಕರಣವೊಂದರಲ್ಲಿ ರಾಜು ಮಿಸ್ತ್ರಿ ಮತ್ತು ಕಮಲ್ ವಾಲ್ಮೀಕಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದರು.

ನಿಗೂಢ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವನ್ನು ಗುರುತಿಸುವಂತೆ ಮಿಸ್ತ್ರಿ ಅವರ ಕುಟುಂಬದವರಿಗೆ ಪೊಲೀಸರು ಹೇಳಿದ್ದರು. ಆದರೆ ಇದು ಕಮಲ್ ಅವರ ಮೃತದೇಹ ಎಂದು ಕಮಲ್ ಕುಟುಂಬದವರು ಗುರುತಿಸಿದ್ದರು. ಕಮಲ್ ಆತ್ಮಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ವಾದಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಅದೇ ವೇಳೆ ಕಮಲ್ ಅವರ ಕುಟುಂಬದವರು ಠಾಣೆಯ ಮೇಲ್ವಿಚಾರಕ ಯೋಗೇಂದ್ರ ಸಿಂಗ್ ಮತ್ತು ಕೆಲವು ಪೊಲೀಸ್ ಪೇದೆಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯೋಗೇಂದ್ರ ಸಿಂಗ್ ಸೇರಿದಂತೆ 12 ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಮಥುರಾದ ಎಸ್‍ಎಸ್‍ಪಿ ಶಲಭ್ ಮಾಥುರ್ ಹೇಳಿದ್ದಾರೆ.

ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ: ಕಮಲ್ ಅವರ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿರುವ ವಾಲ್ಮೀಕಿ ಸಮುದಾಯದ ಜನರು ಕಾನ್ಪುರ್ – ಲಕ್ನೋ ಹೆದ್ದಾರಿ ತಡೆಯೊಡ್ಡಿ ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ಮಾಡಿದ್ದಾರೆ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಏತನ್ಮಧ್ಯೆ, ರಾಜು ಮಿಸ್ತ್ರಿ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

Comments are closed.