ರಾಷ್ಟ್ರೀಯ

ಸೋನಿಯಾ ಆರೋಗ್ಯದಲ್ಲಿ ಚೇತರಿಕೆ: ವಿಶ್ವನಾಥನ ದರ್ಶನವಾಗದ್ದಕ್ಕೆ ಬೇಸರವಿದೆ

Pinterest LinkedIn Tumblr

soniyaದೆಹಲಿ: ಮಂಗಳವಾರ ಉತ್ತರಪ್ರದೇಶದ ವಾರಣಾಸಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೈಗೊಂಡಿದ್ದ “ದರ್ದ್ -ಎ- ಬನಾರಸ್” ರೋಡ್ ಶೊನಲ್ಲಿ ಅಸ್ವಸ್ಥರಾದ ಸೋನಿಯಾರವರನ್ನು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ಹೆಚ್ಚಿನ ತಪಾಸಣೆಗೆ ಕರೆದೊಯ್ಯಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಸ್ವಕ್ಷೇತ್ರ ವಾರಣಾಸಿಯಲ್ಲಿ ಮಂಗಳವಾರ ಚುನಾವಣಾ ರೋಡ್ ಶೋವನ್ನು ಅರ್ಧಕ್ಕೆ ಮೊಟಕುಗೊಳಿಸಿ ತಡರಾತ್ರಿ ದೆಹಲಿಗೆ ವಾಪಸಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜ್ವರದಿಂದ ಬಳಲುತ್ತಿದ್ದರು.

69 ವರ್ಷದ ಸೋನಿಯಾ ಗಾಂಧಿ ನಿನ್ನೆ 8 ಕಿಲೋ ಮೀಟರ್ ರೋಡ್ ಶೋವನ್ನು ಅರ್ಧದಲ್ಲಿಯೇ ಬಿಟ್ಟು ಚಾರ್ಟರ್ಡ್ ವಿಮಾನದಲ್ಲಿ ಮಧ್ಯರಾತ್ರಿ ವೇಳೆಗೆ ದೆಹಲಿಗೆ ಮರಳಿದರು.
ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ವಾರಣಾಸಿಯಲ್ಲಿ ಅವರಿಗೆ ಡಿಹೈಡ್ರೇಷನ್, ಜ್ವರ, ವಾಂತಿಯಾಯಿತು ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಳೆದ ಕೆಲ ದಿನಗಳಿಂದ ತಮ್ಮ ತಾಯಿ ಅನಾರೋಗ್ಯಕ್ಕೀಡಾಗಿದ್ದರು. ಆದರೆ ನಿಗದಿತ ಕಾರ್ಯಕ್ರಮವನ್ನು ರದ್ದುಪಡಿಸುವುದು ಬೇಡವೆಂದು ವಾರಣಾಸಿಗೆ ತೆರಳಿದ್ದರು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ಅವರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸೋನಿಯಾ ಅವರ ಆರೋಗ್ಯ ವಿಚಾರಿಸಿದ್ದಾರೆ.
“ವಾರಣಾಸಿ ಭೇಟಿಯನ್ನು ಅರ್ಧದಲ್ಲೇ ಬಿಟ್ಟುಬರಬೇಕಾಯಿತು. ಶ್ರಾವಣ ಮಾಸದಲ್ಲಿ ಕಾಶಿ ವಿಶ್ವನಾಥನ ದರ್ಶನ ಮಾಡಲು ಸಾಧ್ಯವಾಗಲಿಲ್ಲ.ಸದ್ಯದಲ್ಲಿಯೇ ಕಾಶಿ ವಿಶ್ವನಾಥ ದೇವಾಲಯದ ದರ್ಶನಕ್ಕೆ ಮತ್ತೆ ಬರುತ್ತೇನೆ. ನನ್ನ ಅಸೌಖ್ಯದಿಂದ ಭೇಟಿಯನ್ನು ಪೂರ್ಣಗೊಳಿಸಲಾಗದ್ದಕ್ಕೆ ವಿಷಾದವಿದೆ. ವಾರಣಾಸಿಯ ಜನತೆಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳು” ಎಂದು ಕಾಂಗ್ರೆಸ್ ಅಧ್ಯಕ್ಷೆ ತಿಳಿಸಿದ್ದಾರೆ.

Comments are closed.