ನವದೆಹಲಿ (ಪಿಟಿಐ): ‘ಕಾಶ್ಮೀರದಲ್ಲಿ ಇತ್ತೀಚೆಗೆ ಹೆಚ್ಚಿದ ಹಿಂಸಾಚಾರಕ್ಕೆ ಪಾಕಿಸ್ತಾನ ಉತ್ತೇಜನ ನೀಡಿದೆ. ಕಣಿವೆರಾಜ್ಯದ ಬಿಕ್ಕಟ್ಟು ಹೆಚ್ಚಲು ಪಾಕಿಸ್ತಾನ ‘ಪ್ರಮುಖ ಪಾತ್ರ’ ವಹಿಸಿದೆ’ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ಸಿಂಗ್, ‘ಭಾರತದ ನೆಲದಲ್ಲಿ ಭಯೋತ್ಪಾದನೆ ಬೆಳೆಸಲು ಪಾಕಿಸ್ತಾನ ಕುಮ್ಮಕ್ಕು ಹಾಗೂ ಸಹಕಾರ ನೀಡುತ್ತಿದೆ’ ಎಂದು ಆರೋಪಿಸಿದರು.
ಕಾಶ್ಮೀರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆಯುವಲ್ಲಿ ಪಾಕಿಸ್ತಾನ ‘ಪ್ರಮುಖ ಪಾತ್ರ’ ವಹಿಸಿದೆ ಎಂದು ಸಿಂಗ್ ದೂರಿದರು.
ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿ ಹತ್ಯೆಗೆ ಪಾಕಿಸ್ತಾನ ಜುಲೈ 19ರಂದು ‘ಕರಾಳ ದಿನ’ ಆಚರಿಸಿತ್ತು.
ಪಾಕಿಸ್ತಾನದ ಈ ನಡೆಗೆ ಪ್ರತಿಕ್ರಿಯಿಸಿದ ಸಿಂಗ್, ‘ಭಾರತದ ಆಂತರಿಕ ವಿಷಯಗಳಲ್ಲಿ ಮಧ್ಯ ಪ್ರವೇಶಿಸುವ ಹಕ್ಕು ಪಾಕಿಸ್ತಾನಕ್ಕಿಲ್ಲ. ಪಾಕಿಸ್ತಾನ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಹಾಗೂ ಜನತೆಯ ದಿಕ್ಕು ತಪ್ಪಿಸಲು ಈ ರೀತಿಯ ಕಾರ್ಯಗಳಿಗೆ ಮುಂದಾಗಿದೆ’ ಎಂದರು.
‘ಭಾರತದಲ್ಲಿ ಭಯೋತ್ಪಾದನೆ ಇದ್ದರೆ ಅದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯೇ ಹೊರತು ಬೇರೇನೂ ಅಲ್ಲ’ ಎಂದು ಸಿಂಗ್ ಹೇಳಿದರು.
ಕಾಶ್ಮೀರದ ಪ್ರತಿಭಟನಾಕಾರರಲ್ಲಿ ಕೆಲವರು ಕಣ್ಣು ಕಳೆದುಕೊಳ್ಳಲು ಹಾಗೂ ಕೆಲವರು ಗಂಭೀರವಾಗಿ ಗಾಯಗೊಳ್ಳಲು ಪೊಲೀಸರು ಪೆಲೆಟ್ ಗನ್ ಪ್ರಯೋಗಿಸಿದ್ದೇ ಕಾರಣ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ಪೆಲೆಟ್ ಗನ್ಗಳಿಗೆ ಪರ್ಯಾಯವಾಗಿ ಇತರೆ ಸಾಧನಗಳ ಬಳಕೆಯ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ತಜ್ಞರ ಸಮಿತಿ ನೇಮಿಸಲಾಗುವುದು ಎಂದು ಘೋಷಿಸಿದರು.
Comments are closed.