ಅಹ್ಮದಾಬಾದ್: ದಲಿತ ಯುವಕರ ಮೇಲೆ ನಡೆದ ದೌರ್ಜನ್ಯ ಘಟನೆ ವಿರೋಧಿಸಿ ದಲಿತ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆಯ ಕಾವು ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ಅಹ್ಮದಾಬಾದ್‌ನಲ್ಲಿ ದಲಿತರ ಪ್ರತಿಭಟನೆ ಸಂದರ್ಭದಲ್ಲಿ ಕಲ್ಲು ತೂರಾಟದಲ್ಲಿ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಕಳೆದ ಜುಲೈ 11 ರಂದು ಗಿರ್-ಸೋಮನಾಥ್ ಜಿಲ್ಲೆಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಕೆಲ ಯುವಕರು ದಲಿತ ಸಮುದಾಯದ ಕೆಲ ಯುವಕರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ದಲಿತ ಸಮುದಾಯ ಪ್ರತಿಭಟನೆ ನಡೆಸುತ್ತಿದೆ.
ಅಮ್ರೇಲಿ ಪಟ್ಟಣದಲ್ಲಿ ದಲಿತ ಸಮುದಾಯದವರು ಕಲ್ಲು ತೂರಾಟ ನಡೆಸಿದಾಗ ಸ್ಥಳೀಯ ಪೊಲೀಸ್ ಅಪರಾಧ ದಳ ವಿಭಾಗದ ಪೊಲೀಸ್ ಪೇದೆ ಪಂಕಜ್ ಅಮ್ರೇಲಿ ಸಾವನ್ನಪ್ಪಿದ್ದಾರೆ. ಇತರ 10 ಜನರು ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಂಗಳವಾರದಂದು ಜುನಾಗಢ್ ಜಿಲ್ಲೆಯ ಬಾಟ್ವಾ ಪಟ್ಟಣದಲ್ಲಿ ಮೂವರು ದಲಿತ ಯುವಕರು ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನ ನಡೆಸಿದ ಘಟನೆ ವರದಿಯಾಗಿದೆ.
ರಾಜಕೋಟ್ ಜಿಲ್ಲೆಯ ಗೊಂಡಾಲ್ ಮತ್ತು ಜಮಕನಡೊರ್ನಾ ನಗರಗಳಲ್ಲಿ ಏಳು ಮಂದಿ ದಲಿತ ಯುವಕರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ದಲಿತ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಲ್ಲದೇ ಹಲವಾರು ಸರಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿರುವ ನೂರಾರು ದಲಿತ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Comments are closed.