ರಾಷ್ಟ್ರೀಯ

ಫೋಟೋ ಲೀಕ್‌ : ರೈಲು ಪ್ರಯಾಣದಲ್ಲಿ ಅಬು ಸಲೇಂ, ಪತ್ನಿ ಕೌಸರ್‌ ಭೇಟಿ

Pinterest LinkedIn Tumblr

Abu Salem-700ಹೊಸದಿಲ್ಲಿ : ದಿಲ್ಲಿ ಪೊಲೀಸರು ಕೋರ್ಟ್‌ ವಿಚಾರಣೆಗೆಂದು ರೈಲಿನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಮಹಿಳೆಯೊಬ್ಬಳನ್ನು ಮದುವೆ ಮಾಡಿಕೊಂಡನೆನ್ನಲಾದ ಅಬು ಸಲೇಂ ಮತ್ತು ಆತನ ತಥಾಕಥಿತ ಪತ್ನಿ ಸಯ್ಯದ್‌ ಬಹಾರ್‌ ಕೌಸರ್‌ ಜತೆಯಾಗಿರುವ ಫೋಟೋಗಳು ಇದೀಗ ಮತ್ತೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿವೆ.

ಅಬು ಸಲೇಂ ನನ್ನು ಕೋರ್ಟ್‌ ವಿಚಾರಣೆಗೆಂದು ರೈಲಿನಲ್ಲಿ ಒಯ್ಯುತ್ತಿದ ವೇಳೆ ಆತನ ಭದ್ರತೆಗೆಂದು ನಿಯೋಜಿಸಲ್ಪಟ್ಟಿದ್ದ ಆತನ ಡಿಫೆನ್ಸ್‌ ಲಾಯರ್‌, ಲಾಕಪ್‌ ಇನ್‌ ಚಾರ್ಜ್‌ ಮತ್ತು ಭದ್ರತಾ ಸಿಬಂದಿಯನ್ನು 2014ರಲ್ಲಿ ಮುಂಬಯಿ ಪೊಲೀಸರು ಭದ್ರತಾ ಲೋಪ ಆರೋಪದ ಪ್ರಯುಕ್ತ ತನಿಖೆಗೆ ಗುರಿಪಡಿಸಿದ್ದರು.

ಅಂದಿನ ಮಾಧ್ಯಮ ವರದಿಗಳ ಪ್ರಕಾರ ಲಕ್ನೋಗೆ ರೈಲಿನಲ್ಲಿ ಕೋರ್ಟ್‌ ವಿಚಾರಣೆಗೆ ಒಯ್ಯಲ್ಪಡುತ್ತಿದ್ದ ವೇಳೆ ಸಲೇಂ ರೈಲಿನಲ್ಲಿ ಥಾಣೆಯ ಮಹಿಳೆಯನ್ನು ಮದುವೆಯಾಗಿದ್ದ ಮತ್ತು ಮುಸ್ಲಿಂ ಮೌಲ್ವಿ ಒಬ್ಬರು ಟೆಲಿಫೋನ್‌ನಲ್ಲಿ ಆ ಮದುವೆಯನ್ನು ನಡೆಸಿಕೊಟ್ಟಿದ್ದರು. ಈ ಮದುವೆ 2014ರ ಜನವರಿಯಲ್ಲಿ ನಡೆಯಿತೆಂದು ಹೇಳಲಾಗಿತ್ತು. ಈ ಒಟ್ಟು ಪ್ರಹಸನವನ್ನು ಭದ್ರತಾ ಲೋಪವೆಂದು ಬಗೆಯಲಾಗಿತ್ತು.

ಕಳೆದ ವರ್ಷ ಕೌಸರ್‌ ಅವರು ಟಾಡಾ ನ್ಯಾಯಾಲಯವನ್ನು ಸಂಪರ್ಕಿಸಿ ಸಲೇಂ ಜತೆಗೆ ಮದುವೆಯಾಗಲು ತನಗೆ ಅನುಮತಿ ನೀಡಬೇಕೆಂದು ಕೋರಿದ್ದಳು. 2014ರಲ್ಲಿ ತಾನು ಸಲೇಂ ನನ್ನು ರಹಸ್ಯವಾಗಿ ಮದುವೆಯಾಗಿದ್ದೆ ಎಂದು ಆಕೆ ಕೋರ್ಟಿಗೆ ಹೇಳಿದ್ದಳು.

ಸಲೇಂ ಜತೆ ಕೌಸರ್‌ ಇದ್ದ ಫೋಟೋಗಳನ್ನು ಪೊಲೀಸರು ತನಿಖೆಯ ವೇಳೆ ಸಂಬಂಧಿಸಿದ ಹಲವರಿಗೆ ತೋರಿಸಿ ಇವರೊಳಗೆ ಮದುವೆ ನಡೆದದ್ದು ನಿಜವೇ ಎಂದು ಪ್ರಶ್ನಿಸಿದ್ದರು. ಪೊಲೀಸರ ಈ ಬಗೆಯ ತನಿಖೆಯಿಂದ ಕೌಸರ್‌ ಳ ಮರ್ಯಾದೆಗೆ ಧಕ್ಕೆ ಉಂಟಾಗಿತ್ತು.

ಅದಾಗಿ ವಾರದ ಬಳಿಕ ಅಬು ಸಲೇಂ “ನಾನು ಕೌಸರ್‌ಳನ್ನು ವರಿಸಲು ಸಿದ್ಧನಿದ್ದೇನೆ; ಆ ಮೂಲಕ ಆಕೆಗೆ ತನ್ನ ಬಂಧು ಬಳಗದವರ ನಡುವೆ, ಸಮಾಜದವರ ನಡುವೆ ತಲೆ ಎತ್ತಿ ನಿಲ್ಲಲು ಸಾಧ್ಯವಾಗುವುದಾದರೆ ಆಗಲಿ’ ಎಂದು ಹೇಳಿದ್ದ.

ಆದರೆ ಕೌಸರ್‌ ಮತ್ತು ಸಲೇಂ ಜತೆಗಿದ್ದ ಫೋಟೋಗಳು ಕೇವಲ ಬೋಗಸ್‌ ಮಾತ್ರವಲ್ಲದೆ ಅದು ಅವರಿಬ್ಬರೇ ಕೂಡಿಕೊಂಡು ಅದನ್ನು ಸೃಷ್ಟಿ ಸಿದ್ದರು ಎಂಬುದು ಅನಂತರ ಬಯಲಾಯಿತು.

ಮೊನ್ನೆ ಭಾನುವಾರ ಮಿಡ್‌ ಡೇ ಪತ್ರಿಕೆಯು 2012ರಿಂದ 2015ರ ನಡುವಿನ ಅವಧಿಯಲ್ಲಿ ಕೋರ್ಟ್‌ ವಿಚಾರಣಗೆಂದು ರೈಲಿನಲ್ಲಿ ಒಯ್ಯಲ್ಪಡುತ್ತಿದ್ದ ವೇಳೆ ಅಬು ಸಲೇಂ, ರೈಲಿನಲ್ಲಿ 26ರ ಹರೆಯದ ಕೌಸರ್‌ ಜತೆಗೆ ಊಟ ಮಾಡುತ್ತಿದ್ದ ಫೋಟೋ ಪ್ರಕಟಿಸಿತು. ವಿಶೇಷವೆಂದರೆ ಕೌಸರ್‌ ಳ ಅಜ್ಜ ಸಲೇಂನ ದಾಖಲೆ-ಪತ್ರ ಇತ್ಯಾದಿಗಳನ್ನು ಸ್ವತಃ ನೋಡಿಕೊಳ್ಳುತ್ತಿದ್ದಾರೆ.

ಗಮನಾರ್ಹ ಸಂಗತಿ ಎಂದರೆ ಈಗಲೂ ಬಾಕಿ ಇರುವ ಪ್ರಕರಣಗಳ ಕೋರ್ಟ್‌ ವಿಚಾರಣೆಗೆಂದು ಅಬು ಸಲೇಂ ನನ್ನು ಲಕ್ನೋ ಮತ್ತು ದಿಲ್ಲಿಗೆ ರೈಲಿನಲ್ಲಿ ಕರೆದೊಯ್ಯಲಾಗುತ್ತಿದೆ.

ಸಲೇಂ ನನ್ನು 2005ರಲ್ಲಿ ಪೋರ್ತುಗಲ್‌ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಆತನ ವಿರುದ್ಧ ಭಾರತದ ನ್ಯಾಯಾಲಯಗಳಲ್ಲಿ ಎಂಟು ಪ್ರಕರಣಗಳು ವಿಚಾರಣೆಯಲ್ಲಿವೆ. ಇದರಲ್ಲಿ 1993ರ ಮುಂಬಯಿ ಸ್ಫೋಟ ಪ್ರಕರಣವೂ ಸೇರಿದೆ. ಪ್ರಕೃತ ಅಬು ಸಲೇಂ ಮಹಾರಾಷ್ಟ್ರದ ತಲೋಜಾ ಜೈಲಿನಲ್ಲಿ ಇದ್ದಾನೆ.
-ಉದಯವಾಣಿ

Comments are closed.