ರಾಷ್ಟ್ರೀಯ

ಆರನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಪ್ರಮಾಣ ವಚನ

Pinterest LinkedIn Tumblr

jaya

ಚೆನ್ನೈ: ಆರನೇ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ಮದ್ರಾಸ್ ವಿಶ್ವವಿದ್ಯಾಲಯ ಆವರಣದಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಬೆಂಬಲಿಗರ ಭಾರಿ ಹರ್ಷೋದ್ಘಾರಗಳ ಮಧ್ಯೆ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ ಅವರು ಜಯಲಲಿತಾ ಅವರಿಗೆ ಪ್ರಮಾಣ ವಚನ ಭೋದಿಸಿದರು.

ಇದೇ ವೇಳೆ ಜಯಾ ಆಪ್ತ ಮತ್ತು ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ, ಪಿ. ತಂಗಮಣಿ, ಎಸ್.ಪಿ. ವೇಲುಮಣಿ, ಡಿಂಡಿಗಲ್ ಶ್ರೀನಿವಾಸನ್, ಎಡಪಡಿ ಪಳನಿಸ್ವಾಮಿ, ಸಿ.ವಿ. ಷಣ್ಮುಗಂ, ಕೆ.ಪಿ. ಅನ್ಬಳಗನ್, ಪಿ. ಸರೋಜಾ, ಕೆ.ಸಿ. ಕರುಪಣ್ಣನ್, ಎಂ.ಸಿ. ಸಂಪತ್, ಆರ್. ಕಾಮರಾಜ್, ಒ.ಎಸ್. ಮಣಿಯನ್ ಸೇರಿದಂತೆ ಜಯಾ ಸಂಪುಟದ ಇತರೆ 27 ಮಂದಿ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪಿ. ರಾಧಾಕೃಷ್ಣನ್ ಮತ್ತು ವೆಂಕಯ್ಯ ನಾಯ್ಡು ಅವರು ವಿಶೇಷ ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದರು.

ಪ್ರಮಾಣ ವಚನ ವೇಳೆ ಅಭಿಮಾನಿಗಳ ಹರ್ಷೋದ್ಘಾರ, ರಸ್ತೆಯುದ್ದಕ್ಕೂ ಜಯಾಗೆ ಹೂ ಮಳೆ ಸುರಿಸಿದ ಬೆಂಬಲಿಗರು
ಸತತ 2ನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಜಯಲಲಿತಾ ಅವರನ್ನು ನೋಡಲು ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಆಗಮಿಸಿದ್ದರು. ಜಯ ಲಲಿತಾ ಅವರು ಆಗಮಿಸುವ ರಸ್ತೆಯ ಬದಿಗಳಲ್ಲಿ ನಿಂತಿದ್ದ ಬೆಂಬಲಿಗರು, ಅಭಿಮಾನಿಗಳು ಜಯಾ ಅವರ ಕಾರು ಬರುತ್ತಿದ್ದಂತೆಯೇ ಅವರ ಮೇಲೆ ಹೂ ಮಳೆ ಸುರಿಸುವ ಮೂಲಕ ಶುಭಾಶಯ ಕೋರಿದರು. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಜಯಲಲಿತಾ ಪ್ರಮಾಣ ವಚನ ಕಾಲದಲ್ಲಿ ಭಾರಿ ಕರತಾಡನ ಜೊತೆಗೆ ಜಯಘೊಷಗಳನ್ನು ಕೂಗಿದರು.

Comments are closed.