ರಾಷ್ಟ್ರೀಯ

ಅಮ್ಮಾ – ದೀದಿ ಮತ್ತೆ ಅಧಿಕಾರಕ್ಕೆ ! ಬಿಜೆಪಿಗೆ ಅಸ್ಸಾಂ – ಕೇರಳ ಎಲ್‌ಡಿಎಫ್ ಗೆ; ನೆಲಕಚ್ಚಿದ ಕಾಂಗ್ರೆಸ್

Pinterest LinkedIn Tumblr

jaya

ಹೊಸದಿಲ್ಲಿ: ಎಲ್ಲ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿರುವಂತೆಯೇ, ಬಿಜೆಪಿ ಪಾಳಯದಲ್ಲಿ ‘ಅಚ್ಛೇ ದಿನ್’ ಕಾಣಿಸಿಕೊಳ್ಳತೊಡಗಿದ್ದರೆ, ಕಾಂಗ್ರೆಸ್ ಪಾಳಯ ಕುಗ್ಗಿ ಹೋಗಿದೆ.

ಮೊದಲ ಬಾರಿಗೆ ಈಶಾನ್ಯ ರಾಜ್ಯವೊಂದರಲ್ಲಿ ಅಧಿಕಾರ ಸ್ಥಾಪನೆಗೆ ಸನ್ನದ್ಧವಾಗುತ್ತಿರುವ ಬಿಜೆಪಿ ಮೈತ್ರಿಕೂಟ ಎನ್‌ಡಿಎ, ಎಡಪಂಥೀಯ ಪ್ರಾಬಲ್ಯದ ಪಶ್ಚಿಮ ಬಂಗಾಳ ಹಾಗೂ ಕೇರಳಗಳಲ್ಲಿಯೂ ತನ್ನ ಪುಟ್ಟ ಹೆಜ್ಜೆ ಇಡಲಾರಂಭಿಸಿದೆ.

ಮೂರು ಅವಧಿಗಳಿಗೆ ಅಧಿಕಾರದ ಚುಕ್ಕಾಣಿಯನ್ನು ಜತನದಿಂದ ಕಾಯ್ದುಕೊಂಡು ಬಂದಿದ್ದ ಕಾಂಗ್ರೆಸ್‌ನ್ನು ಅಸ್ಸಾಂನಲ್ಲಿ ಮನೆಗೆ ಕಳುಹಿಸುವಲ್ಲಿ ಭಾರತೀಯ ಜನತಾ ಪಕ್ಷ ಯಶಸ್ವಿಯಾಗಿದೆ. ಇನ್ನು ಕೇರಳದಲ್ಲಿ ಎಡರಂಗದ ಎದುರು ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ನೆರೆಯ ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ಮಾಡಿಕೊಂಡರೂ ಆಡಳಿತಾರೂಢ ಎ.ಐ.ಎ.ಡಿ.ಎಂ.ಕೆ. ಎದುರು ಮುಗ್ಗರಿಸಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಮತ್ತೆ ಗೆಲುವಿನ ನಗೆ ಬೀರಿದ್ದು, ಕೇಂದ್ರಾಡಳಿತ ಪ್ರದೇಶ ಪುದುಚೆರಿ ಮತ್ತೆ ರಂಗಸಾಮಿ ಪಕ್ಷದ ಪರ ವಾಲುವ ಲಕ್ಷಣಗಳು ಕಂಡುಬಂದಿವೆ.

ವಿಜಯ ಸಾರಥಿಗಳು

* ತಮಿಳುನಾಡಿನಲ್ಲಿ ಜಯಲಲಿತಾಗೆ ಮತ್ತೆ ಮುಖ್ಯಮಂತ್ರಿ ಅವಕಾಶ.

* ಎರಡನೆಯ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಅಧಿಕಾರ.

* ಅಸ್ಸಾಂನಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ.

* ಸರಬಾನಂದ್ ಅಸ್ಸಾಂ ಹೊಸ ಮುಖ್ಯಮಂತ್ರಿ.

* ಪುದುಚೇರಿಯಲ್ಲಿ ರಂಗಸಾಮಿ ಅಧಿಕಾರ ಯೋಗ.

ಆಡಳಿತಾರೂಢ ಎಐಎಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಅನುಕ್ರಮವಾಗಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಲದಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಫಲವಾಗಿವೆ.

ಸತತವಾಗಿ ಹದಿನೈದು ವರ್ಷಗಳ ಕಾಲ ಅಸ್ಸಾಂನಲ್ಲಿ ಅಧಿಕಾರ ಅನುಭವಿಸಿಕೊಂಡು ಬಂದಿದ್ದ ಕಾಂಗ್ರೆಸ್‌ನ್ನು ಪದಚ್ಯುತಗೊಳಿಸಿ ಅಧಿಕಾರದ ಗಾದಿಯನ್ನು ಏರುವ ಮೂಲಕ ಭಾರತೀಯ ಜನತಾ ಪಕ್ಷವು ಪೂರ್ವ ಭಾರತದಲ್ಲಿ ಹೊಸ ಇತಿಹಾಸ ದಾಖಲಿಸಿದೆ.

ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷವು ಸತತವಾಗಿ ಎರಡನೇ ಬಾರಿಗೂ ದಿಗ್ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಟಿ.ಎಂ.ಸಿ. ವಿರುದ್ಧ ಮೊದಲ ಬಾರಿಗೆ ಮೈತ್ರಿಕೂಟ ರಚಿಸಿಕೊಂಡು ಭಾರಿ ಉಮೇದಿನಿಂದ ಚುನಾವಣಾ ಅಖಾಡಕ್ಕಿಳಿದಿದ್ದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್‌ಗೆ ಮತ ಬಾಂಧವರು ಒಲವು ತೋರಿಲ್ಲ.

ಸತತವಾಗಿ ಎರ‌ಡನೇ ಬಾರಿಗೆ ಅಧಿಕಾರಕ್ಕೆ ಹಿಂತಿರುಗುವ ಮೂಲಕ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರೂ ಕೂಡ ಹೊಸ ಇತಿಹಾಸಕ್ಕೆ ನಾಂದಿ ಹೇಳಿದ್ದಾರೆ. ಆಡಳಿತದಲ್ಲಿರುವ ಪಕ್ಷ ಈವರೆಗೆ ಎರಡನೇ ಅವಧಿಗೆ ಆಯ್ಕೆ ಹೊಂದಿಲ್ಲ ಎಂಬ ಚುನಾವಣಾ ವಿಶ್ಲೇಷಣೆಗಳು ತಮಿಳುನಾಡಿನಲ್ಲಿ ಮೊದಲ ಬಾರಿಗೆ ತಲೆ ಕೆಳಗಾಗಿವೆ.

ಕಾಂಗ್ರೆಸ್‌ನೊಂದಿಗೆ ಕೊನೆಯ ಘಳಿಗೆಯಲ್ಲಿ ಸ್ಥಾನಗಳ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಹಗಲು ಗನಸು ಕಾಣುತ್ತಿದ್ದ ಡಿ.ಎಂ.ಕೆ. ತೀವ್ರ ಮುಖಭಂಗಕ್ಕೆ ಗುರಿಯಾಗಿರುವುದು ಸಹಜವೇ.

ಯಾವ ಮೈತ್ರಿಕೂಟದತ್ತ ಕ್ಯಾರೇ ಎನ್ನದೆ ಒಂಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಲಗ್ಗೆ ಹಾಕುವ ಭ್ರಮೆ ಹೊಂದಿದ್ದ ಕ್ಯಾಪ್ಟನ್ ವಿಜಯಕಾಂತ್‌ಗೆ ಈಗ ವಿಧಾನಸಭೆಯಲ್ಲಿ ಹೇಳಿಕೊಳ್ಳಲು ಕೂಡ ಒಂದೇ ಒಂದು ಸ್ಥಾನ ದಕ್ಕಲಿಲ್ಲ.

ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗವು (ಎಲ್‌.ಡಿ.ಎಫ್), ಆಡಳಿತಾರೂಢ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವನ್ನು ಧೂಳೀಪಟ ಮಾಡುವಲ್ಲಿ ಭಾರಿ ಯಶಸ್ಸು ಸಾಧಿಸಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಬಿಜೆಪಿಯು ವಿಧಾನಸಭೆಗೆ ಪದಾರ್ಪಣೆ ಮಾಡುವ ಸುಯೋಗಕ್ಕೆ ಪಾತ್ರವಾಗಿದೆ.

ಪುದುಚೆರಿಯಲ್ಲಿ ಮುಖ್ಯಮಂತ್ರಿ ಎಐಎನ್‌ಆರ್‌ಸಿ ಹಾಗೂ ಕಾಂಗ್ರೆಸ್ – ಡಿ.ಎಂ.ಕೆ. ಮೈತ್ರಿಕೂಟ ಒಟ್ಟು ಮೂವತ್ತು ಸ್ಥಾನಗಳಲ್ಲಿ ಸಮಬಲದ ಪ್ರದರ್ಶನ ನೀಡುತ್ತಿದ್ದು, ಅಂತಿಮವಾಗಿ ಜಯಮಾಲೆ ಯಾರ ಕೊರಳಿಗೆ ಎಂಬುದು ಇದೀಗ ಕುತೂಹಲದ ಪ್ರಶ್ನೆ.

ಐತಿಹಾಸಿಕ ಜನಾದೇಶ

ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಐತಿಹಾಸಿಕ ಜನಾದೇಶ.

– ಪ್ರಧಾನಿ ನರೇಂದ್ರಮೋದಿ

ನಿರೀಕ್ಷಿತ – ಅನಿರೀಕ್ಷಿತ

ಚುನಾವಣೆ ಫಲಿತಾಂಶ ನಿರೀಕ್ಷಿತವೂ ಅಲ್ಲ – ಅನಿರೀಕ್ಷಿತವೂ ಅಲ್ಲ. ಅಸ್ಸಾಂನಲ್ಲಿ ಪ್ರಭುತ್ವ ವಿರೋಧಿ ಅಲೆಯಿಂದ ಕಾಂಗ್ರೆಸ್‌ಗೆ ಸೋಲಾಗಿದೆ. ಏನೇ ಆದರೂ ಫಲಿತಾಂಶದಿಂದ ನಿರಾಸೆಯಾಗಿದೆ.

– ಕಾಂಗ್ರೆಸ್ ಪಕ್ಷದ ಮನೀಶ್ ತಿವಾರಿ

Comments are closed.