ರಾಷ್ಟ್ರೀಯ

ನಿಮಗೆ ತಾಕತ್ತಿದ್ದರೆ ದಾವೂದ್ ಭಾಯ್ ಯನ್ನು ಬಂಧಿಸಿ ಎಂದು ಭಾರತಕ್ಕೆ ಸವಾಲು ಹಾಕಿದ ಭೂಗತ ಪಾತಕಿ ಛೋಟಾ ಶಕೀಲ್

Pinterest LinkedIn Tumblr

DAWOOD

ನವದೆಹಲಿ: ನಿಮಗೆ ತಾಕತ್ತಿದ್ದರೆ ದಾವೂದ್ ಭಾಯ್ ರನ್ನು ಬಂಧಿಸಿ ಎಂದು ಭೂಗತ ಪಾತಕಿ ಛೋಟಾ ಶಕೀಲ್ ಬುಧವಾರ ಭಾರತ ಸರ್ಕಾರಕ್ಕೆ ಸವಾಲು ಹಾಕಿದ್ದಾನೆ.

ಖಾಸಗಿ ಸುದ್ದಿವಾಹಿನಿಯೊಂದು ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿರುವ ಕುರಿತು ಕುಟುಕು ಕಾರ್ಯಾಚರಣೆ ನಡೆಸಿ ಬಹಿರಂಗಪಡಿಸಿತ್ತು. ಈ ಕಾರ್ಯಕ್ರಮ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಮಾಧ್ಯಮಗಳಿಗೆ ಕರೆ ಮಾಡಿರುವ ದಾವೂದ್ ಬಲಗೈ ಬಂಟ ಛೋಟಾ ಶಕೀಲ್ ನಿಮಗೆ ತಾಕತ್ತಿದ್ದರೆ ದಾವೂದ್ ಭಾಯ್ ರನ್ನು ಬಂಧಿಸಿ ಎಂದು ಭಾರತಕ್ಕೆ ಸವಾಲೆಸೆದಿದ್ದಾನೆ.

ಕರಾಚಿಯಿಂದ ದೂರವಾಣಿಯಲ್ಲಿ ಮಾತನಾಡಿದ ಶಕೀಲ್, ದಾವೂದ್ ಭಾಯ್ ಎಲ್ಲಿದ್ದಾರೆ ಎಂದು ನಿಮಗೆ ತಿಳಿದಿದ್ದರೆ ಅವರನ್ನು ಹಿಡಿಯಿರಿ ಎಂದು ಸವಾಲೆಸೆದಿದ್ದಾನೆ.

ಕುಟುಕು ಕಾರ್ಯಾಚರಣೆಯಲ್ಲಿ ದಾವೂದ್ ನಿವಾಸ ಮತ್ತು ವಿಳಾಸ ಬಹಿರಂಗ
ಇನ್ನು ಖಾಸಗಿ ಸುದ್ದಿವಾಹಿನಿಯೊಂದು ರಹಸ್ಯವಾಗಿ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ಇರುವ ಕುರಿತು ಸಾಕ್ಷ್ಯ ಸಮೇತ ಪ್ರಸಾರ ಮಾಡಿತ್ತು. ಸುದ್ದಿವಾಹಿನಿ ನಡೆಸಿದ್ದ ಈ ಕಾರ್ಯಾಚರಣೆಯಲ್ಲಿ ದಾವೂದ್ ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಉಗ್ರ ಮುಖಂಡ ಒಸಾಮಾ ಬಿನ್ ಲಾಡೆನ್ ಅವಿತಿದ್ದ ಭಾರಿ ರಕ್ಷಣೆ ಬಂಗಲೆ ಮಾದರಿಯ ಕಟ್ಟಡದಲ್ಲಿ ದಾವೂದ್ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಕರಾಚಿಯ ಕ್ಲಿಫ್ಟನ್ ಏರಿಯಾದ 4ನೇ ಬ್ಲಾಕ್ ನಲ್ಲಿರುವ ಡಿ13 ಮನೆಯಲ್ಲಿ ದಾವೂದ್ ವಾಸಿಸುತ್ತಿದ್ದಾನೆ ಎಂದು ಕುಟುಕು ಕಾರ್ಯಾಚರಣೆ ನಡೆಸಿದ ವಾಹಿನಿ ಹೇಳಿದೆ. ದಾವೂದ್ ಇದೇ ಬಂಗಲೆಯಲ್ಲಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಕೆಲವರು ಆತ ಹೊರಗೆ ಬಂದಾಗ ನೋಡಿರುವುದಾಗಿ ತಿಳಿಸಿದ್ದಾರೆ. ಅಬೋಟಾಬಾದ್ ನಲ್ಲಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಗೆ ಕಲ್ಪಿಸಲಾಗಿದ್ದ ರಕ್ಷಣೆಯನ್ನೇ ದಾವೂದ್ ಗೂ ಕಲ್ಪಿಸಲಾಗಿದ್ದು, ಕುಟುಕು ಕಾರ್ಯಾಚರಣೆಯಲ್ಲಿರುವ ವಿಡಿಯೋ ಅನ್ವಯ ದಾವೂದ್ ಉಳಿದುಕೊಂಡಿರುವ ಕ್ಲಿಫ್ಟನ್ ಏರಿಯಾದ ಬಂಗಲೆಗೆ ಮೂರು ಸುತ್ತಿನ ಕಾಂಪೌಂಡ್ ರಕ್ಷಣೆ ಇದ್ದು, ಸದಾಕಾಲ ಬಂಗಲೆಗೆ ಶಸ್ತ್ರಸಜ್ಜಿತ ಕಾವಲುಗಾರರು ಭದ್ರತೆ ಒದಗಿಸುತ್ತಾರೆ.

ಮನೆಯ ಸುತ್ತ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿಗಳು ಬ್ಯಾರಿಕೇಡ್ ನಿರ್ಮಿಸಿ, ಕಾವಲು ಕಾಯುತ್ತಿರುತ್ತಾರೆ. ಮನೆಯ ಪ್ರಮುಖ ಬಾಗಿಲ ಮುಂದೆ ಹಾಗೂ ಅಲ್ಲಿಂದ ಪ್ರಮುಖ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯವರೆಗೂ ದಾವೂದ್ ಭದ್ರತಾ ಸಿಬ್ಬಂದಿಗಳು 24/7 ಮಾದರಿಯಲ್ಲಿ ರಕ್ಷಣೆ ಒದಗಿಸುತ್ತಿರುತ್ತಾರೆ. ದಾವೂದ್ ಮನೆಯ ಸುತ್ತ ಸುಮಾರು 3 ಮೀಟರ್ ಎತ್ತರದ ಬೃಹತ್ ಗೋಡೆ ಇದ್ದು, ಅದನ್ನು ಏರಿ ಮನೆಯ ಆವರಣ ಪ್ರವೇಶಿಸುವುದು ಅಸಾಧ್ಯವಂತೆ.

1993ರ ಸರಣಿ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಸುಮಾರು 37ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾರತ ಸರ್ಕಾರಕ್ಕೆ ಬೇಕಾಗಿದ್ದು, ಆತನ ವಿರುದ್ಧ ಈ ಹಿಂದೆ ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿದೆ. ಆತನ ಬಂಧನಕ್ಕಾಗಿ ಭಾರತೀಯ ಭದ್ರತಾ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈ ಕುರಿತು ಪಾಕಿಸ್ತಾನದ ಮೇಲೆ ಎಷ್ಟೇ ಒತ್ತಡ ಹೇರಿದರೂ ಪಾಕ್ ಸರ್ಕಾರ ಮಾತ್ರ ಆತ ನಮ್ಮ ದೇಶದಲ್ಲಿ ಇಲ್ಲ ಎಂದೇ ವಾದಿಸುತ್ತಿದೆ.

Write A Comment