ರಾಷ್ಟ್ರೀಯ

ಮೋದಿ ಹೊಗಳಿದ ಬಿಜೆಪಿ ವಿರುದ್ಧ ಶಿವಸೇನೆ ಕಿಡಿಕಿಡಿ

Pinterest LinkedIn Tumblr

Uddhavಮುಂಬೈ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿಯು ‘ದೇವರು’ ಆಗಿಸಿದೆ. ಆದರೆ, ‘ಭಕ್ತರು’ ಮೋದಿ ಅವರನ್ನು ಅವರ ಸ್ಥಾನಕ್ಕೆ ಇಳಿಸುತ್ತಾರೆ ಎಂದು ಶಿವಸೇನೆ ಸೋಮವಾರ ಎಚ್ಚರಿಸಿದೆ.

ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರು ಮೋದಿ ಅವರನ್ನು ‘ಭಾರತಕ್ಕೆ ದೇವರು ನೀಡಿದ ವರ’ ಎಂದು ಬಣ್ಣಿಸಿದ್ದರು. ಮತ್ತೊಬ್ಬ ಕೇಂದ್ರ ಸಚಿವ ರಾಧಾಮೋಹನ್ ಸಿಂಗ್ ಅವರೂ ಇಂಥದ್ದೇ ಪದ ಬಳಸಿ ಹೊಗಳಿದ್ದರು.

ಬಿಜೆಪಿ ಮುಖಂಡರ ಈ ಹೇಳಿಕೆಗಳಿಗೆ ಶಿವಸೇನೆಯು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಪ್ರಧಾನಿ ಮೋದಿ ದೇವರ ‘ಅವತಾರ’ ಎಂದು ಬಿಜೆಪಿಯ ಹಿರಿಯ ಮುಖಂಡರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರನ್ನು ದೇವರನ್ನಾಗಿ ಮಾಡಲಾಗಿದೆ, ಅವರ ಹೆಸರಿನ ದೇವಾಲಯ ಮತ್ತು ಉತ್ಸವ ಅಷ್ಟೇ ಬಾಕಿ ಉಳಿದಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದೇ ‌ಇರಬಹುದು. ಆದರೆ, ಹೊಸ ದೇವರ ಹೆಸರಲ್ಲಿ ‘ಶ್ಲೋಕ’ಗಳ ಪಠಣ ಆಗಲಿದೆ’ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ವ್ಯಂಗ್ಯವಾಡಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜಾಹೀರಾತಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಆದರೆ, ದೇಶದಲ್ಲಿ ತುರ್ತು ಪರಿಸ್ಥಿತಿಯ ಬಳಿಕ ಅವರು ಅಧಿಕಾರ ಕಳೆದುಕೊಂಡರು ಎಂಬುದನ್ನು ಬಿಜೆಪಿಯ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಶಿವಸೇನೆ ಎಚ್ಚರಿಸಿದೆ.

‘ಭಕ್ತರ ಪರಿಣಾಮದಿಂದಾಗಿ ರಾಜಕಾರಣಿಗಳು ಹಾಗೂ ದೇವರುಗಳು ತೊಂದರೆ ಅನುಭವಿಸುತ್ತಾರೆ. ಇದು ಮಹಾಭಾರತದ ಕಾಲದಿಂದ ಪ್ರಸಕ್ತ ದೆಹಲಿಯ ರಾಜಕೀಯ ಪರಿಸ್ಥಿತಿಯ ತನಕ ನಡೆಯುತ್ತಲೇ ಬಂದಿದೆ’ ಎಂದು ಅದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ‘‌‍ನ್ಯಾಯಮೂರ್ತಿಗಳ ನೇಮಕ ಸಂಬಂಧ ಪ್ರಧಾನಿ ಸಮ್ಮುಖದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ಕಣ್ಣೀರು ಹಾಕಿದ್ದಾರೆ. ಇದು ಮೋದಿ ನೇತೃತ್ವದ ಸರ್ಕಾರದ ಸಾಧನೆ ಎಂದು ಪರಿಗಣಿಸಬೇಕೆ?’ ಎಂದು ಶಿವಸೇನೆ ಪ್ರಶ್ನಿಸಿದೆ.

‘ದೇಶದ ಶೇಕಡ 33ರಷ್ಟು ಭಾಗದಲ್ಲಿ ಬರ ಬಿದ್ದಿದೆ. ಮರಾಠಾವಾಡ, ಬುಂದೆಲ್‌ಖಂಡದಂಥ ಪ್ರದೇಶಗಳು ಭಣಗುಟ್ಟುತ್ತಿದ್ದು, ಸ್ಮಶಾನಗಳಂತೆ ಗೋಚರಿಸುತ್ತಿವೆ. ಎರಡು ವರ್ಷ ಕಳೆದರೂ ಸರ್ಕಾರದ ಯೋಜನೆಗಳು ತಲುಪಿಲ್ಲ. ಇದು ಹಿಂದಿನ ಸರ್ಕಾರ ವಿಫಲತೆ ಎನ್ನಲು ಸಾಧ್ಯವಿಲ್ಲ’ ಎಂದು ಟಾಂಗ್ ನೀಡಿದೆ.

‘ಚುನಾವಣೆಗೂ ಮುನ್ನ ನೀಡಿದ್ದ ಕಪ್ಪುಹಣ ವಾಪಸ್ ತರುವ, ಹಣದುಬ್ಬರ ತಗ್ಗಿಸುವ, ಭ್ರಷ್ಟಾಚಾರವನ್ನು ಕೊನೆಗೊಳಿಸುವ ಭರವಸೆಗಳು ಏನಾದವು? ಇವೆಲ್ಲ ಮೋದಿ ಸರ್ಕಾರದ ಸಾಧನೆಗಳೆಂದು ನಾವು ಹೇಗೆ ಹೇಳಬೇಕು?’ ಎಂದು ಅದು ಪ್ರಶ್ನಿಸಿದೆ.

Write A Comment