ರಾಷ್ಟ್ರೀಯ

ಆಂಧ್ರ ಮೂಲದ ಶಿಕ್ಷಣ ಸಂಸ್ಥೆಗಳ 100% ರಿಸಲ್ಟ್ ರಹಸ್ಯದ ಕರಾಮತ್ತು ಬಯಲಿಗೆ

Pinterest LinkedIn Tumblr

andraವಿದೇಶಿಯರ ದುರಾಕ್ರಮಣದಿಂದ ನಮ್ಮ ಸನಾತನ ಶಿಕ್ಷಣ ಪದ್ಧತಿ ನಶಿಸಿತು. ಪಾಶ್ಚಿಮಾತ್ಯ ಪ್ರಭಾವದಿಂದ ಇಲ್ಲಿನ ಶಿಕ್ಷಣ ವ್ಯವಸ್ಥೆ ಹಾಳಾಯಿತು ಎಂದು ಬಡಬಡಿಸುತ್ತೇವೆ. ಪ್ರಸ್ತುತ ನಮ್ಮವರಿಂದಲೇ ಇಡೀ ಶಿಕ್ಷಣ ಕ್ಷೇತ್ರವೇ ಬುಡ ಮೇಲಾಗಿ ದೇಶದ ಉಜ್ವಲ ಭವಿಷ್ಯ ಕಗ್ಗತ್ತಲೆಗೆ ಜಾರುತ್ತಿರುವ ಈ ಸಂದರ್ಭದಲ್ಲಿ ನಾವು ಏನು ಮಾಡಬೇಕು, ಯಾರನ್ನು ದೂಷಿಸಬೇಕು ಅಥವಾ ಯಾರ ಮೊರೆ ಹೋಗಬೇಕು. ಖಾಸಗಿ ವಿದ್ಯಾಸಂಸ್ಥೆಗಳ ಅನಾರೋಗ್ಯಕರ, ಅಪವಿತ್ರ ಸ್ಪರ್ಧೆ, ಹಣದ ದಾಹ, ಸರ್ಕಾರಗಳ ದಿವ್ಯ ನಿರ್ಲಕ್ಷ್ಯಗಳಿಂದಾಗಿ ಈ ದೇಶ ಕಟ್ಟಬೇಕಾದ ಭಾವೀ ಪ್ರಜೆಗಳ ನೈತಿಕತೆಗೇ ಕೊಡಲಿ ಪೆಟ್ಟು ಬೀಳುತ್ತಿದೆಯಲ್ಲಾ… ಇದೆಲ್ಲ ಗೊತ್ತಿದ್ದೂ ಸರ್ಕಾರಗಳೇಕೆ ಜಾಣ ಕುರುಡು ಪ್ರದರ್ಶಿಸುತ್ತಿವೆ.

ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಂದು ಬಹುತೇಕ ಖಾಸಗಿ ವಿದ್ಯಾಸಂಸ್ಥೆಗಳು ಹಲವು ರಾಜಕಾರಣಿಗಳು, ಪ್ರಭಾವಿಗಳ ಕಪಿಮುಷ್ಟಿಯಲ್ಲಿರುವುದು!

ನಮ್ಮ ಶಿಕ್ಷಣ ಕ್ಷೇತ್ರ ಅದೆಷ್ಟು ಭ್ರಷ್ಟವಾಗಿದೆ ಎಂದರೆ ರಾಜಕಾರಣಿಗಳು, ಸರ್ಕಾರಿ ನೌಕರರು, ಖಾಸಗಿ ಶಿಕ್ಷಕರು ರಾಜಾರೋಷವಾಗಿ ತಮ್ಮ ಪ್ರಭಾವ ಬಳಸಿಕೊಂಡು ಯಾವುದು ಈ ದೇಶದ ಬುನಾದಿಯಾಗಬೇಕಿತ್ತೋ, ಪವಿತ್ರವಾಗಿರಬೇಕಿತ್ತೋ… ಭಾವೀ ಪ್ರಜೆಗಳಿಗೆ ದಾರಿ ದೀಪವಾಗಿರಬೇಕಿತ್ತೋ ಆ ಶಿಕ್ಷಣ ಕ್ಷೇತ್ರ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡು ಹೊಲಸೆದ್ದು ನರಳುವಂತೆ ಮಾಡುತ್ತಿದ್ದಾರೆ.ಪ್ರಸಕ್ತ ಈಗ ಸಾಮಾಜಿಕ ಪಿಡುಗಾಗಿರುವ ಪ್ರಶ್ನೆಪತ್ರಿಕೆ ಸೋರಿಕೆ ವಿಷಯಕ್ಕೆ ಬರೋಣ. ಪ್ರಶ್ನೆಪತ್ರಿಕೆ ಸೋರಿಕೆ ಎಂಬ ಕಬಂಧ ಬಾಹುಗಳಲ್ಲಿ ಸಿಕ್ಕ ಲಕ್ಷಾಂತರ ಮಕ್ಕಳ ಭವಿಷ್ಯ ಮಣ್ಣಾಗಿ ಹೋಗಿದೆ. ತಮ್ಮ ಬದುಕಿನ ಭವಿಷ್ಯಕ್ಕೆ ಭಾಷ್ಯ ಬರೆಯಬೇಕಿದ್ದ ಮಕ್ಕಳು ನಮಗೆ ಈ ಶಿಕ್ಷಣವೂ ಬೇಡ, ಈ ಬದುಕೇ ಬೇಡ ಎಂಬ ನೈರಾಶ್ಯದ ದುಸ್ಥಿತಿಗೆ ತಲುಪಿದ್ದಾರೆ. ಎಂಥ ಘೋರ ದುರಂತ ನೋಡಿ…!

ಅಂದ ಹಾಗೆ ಈ ನೀಚ ಕೃತ್ಯದಲ್ಲಿ ಭಾಗಿಯಾಗಿರುವವರು ಖಾಸಗಿ ವಿದ್ಯಾಸಂಸ್ಥೆ(ಶಾಲೆ)ಗಳವರು , ಖಾಸಗಿ ಶಾಲೆಗಳ ಶಿಕ್ಷಕರು(ಅದರಲ್ಲೂ ದೈಹಿಕ ಶಿಕ್ಷಕರು) ನೇರವಾಗಿ ಭಾಗಿಯಾಗಿ ಇಂತಹ ಪರಮ ನೀಚ ಕೃತ್ಯಗಳನ್ನೆಸಗಿ ಯುದ್ಧ ಗೆದ್ದು ಬಂದವರಂತೆ ಅಡ್ಡಾಡುತ್ತಾರೆ. ಇದೆಲ್ಲ ಗೊತ್ತಿದ್ದರೂ ಶಿಕ್ಷಣ ಇಲಾಖೆ ತೆಪಗಿರುತ್ತದೆ. ಅದಕ್ಕೆ ಕಾರಣ ಮೇಲೆಯೇ ಹೇಳಿದೆನಲ್ಲ. ದೊಡ್ಡವರ ಪ್ರಭಾವ.

ದೃಶ್ಯ 1 ಹೀಗೆ ಪ್ರಾರಂಭವಾಗುತ್ತದೆ:

ಇನ್ನೇನು ಪರೀಕ್ಷೆಗೆ(ಪಿಯು, ಎಸ್‌ಎಸ್‌ಎಲ್‌ಸಿ ಯಾವುದೇ ಇರಲಿ) ಒಂದೆಡು ದಿನ ಬಾಕಿ ಇದೆ ಎನ್ನುವಾಗ ಒಂದು ಶುಭ ಮುಹೂರ್ತದಲ್ಲಿ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಶಾಲೆಗಳು ತಮ್ಮ ಶಾಲೆಯ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೆಲ್ಲ ಶಾಲೆಗ ಕರೆಸಿ ತಾವು ಕದ್ದು ತಂದ ಪ್ರಶ್ನೆ ಪತ್ರಿಕೆಗಳನ್ನು ಆ ಮಕ್ಕಳಿಗೇ ತಿಳಿಯದಂತೆ ಅವರಿಗೆ ಮನನ ಮಾಡಿಸಿ ಕೊಡುತ್ತಾರೆ. ಇದರಲ್ಲಿ ಪ್ರಮುಖವಾಗಿ ಹೊರ ರಾಜ್ಯಗಳಿಂದ ಬಂದ ಸಂಸ್ಥೆಗಳದ್ದೇ ಸಿಂಹ ಪಾಲು. ಈ ಪ್ರಶ್ನೆ ಪತ್ರಿಕೆ ಕದಿಯುವ ಕೆಲಸವೇನಿದ್ದರೂ ಖಾಸಗಿ ಶಿಕ್ಷಕರು, ದೈಹಿಕ ಶಿಕ್ಷಕರು, ಸರ್ಕಾರಿ ಗುಮಾಸ್ತರು ಇತ್ಯಾದಿಗಳದ್ದು. ಅವರಿಗೆ ಕೈ ತುಂಬಾ ಹಣ ನೀಡಲಾಗುತ್ತದೆ. ಕದ್ದ ಪ್ರಶ್ನೆಪತ್ರಿಕೆ ಸಹಾಯದಿಂದ ಟಾಪರ್ಸ್್ ನೂರಕ್ಕೆ ನೂರು ಅಂಕ ತೆಗೆಯುತ್ತಾರೆ. ಅಲ್ಲಿಗೆ ಶಾಲೆಗಳಿಗೆ ಹೆಸರು, ತನ್ಮೂಲಕ ಪೋಷಕರಿಂದ ಹಣ ಸುಲಿಗೆ, ಪ್ರಶ್ನೆಪತ್ರಿಕೆ ಕದಿಯುವವರಿಗೆ, ಅದನ್ನು ನೋಡಿ ಸುಮ್ಮನಿರುವವರಿಗೆ ಎಂಜಲು ಕಾಸು ಸಿಗುತ್ತದೆ. ಇದು ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಕ್ರೂರ ವ್ಯವಸ್ಥೆಯೊಂದರ ಸೂಕ್ಷ್ಮ ನೋಟ.

ಇದು ಎರಡನೇ ದೃಶ್ಯ:

ಈ ಎರಡನೇ ದೃಶ್ಯದಲ್ಲೇ ಎಡವಟ್ಟಾಗಿದ್ದು , ಯಥಾ ಪ್ರಕಾರ ಆಂಧ್ರ ಮೂಲದ ನಂ.1ಎಂದು ಹೇಳಿಕೊಳ್ಳುವ ಕೆಲ ಖಾಸಗಿ ಶಾಲೆಯವರು ತಮ್ಮ ಟಾಪರ್ ಪಿಯು ವಿದ್ಯಾರ್ಥಿಗಳನ್ನು ಸೇರಿಸಿ ಅವರಿಗೆ ಈ ಕದ್ದ ಪ್ರಶ್ನೆ ಪತ್ರಿಕೆಗಳಲ್ಲಿದ್ದ ಎಲ್ಲಾ ಪ್ರಶ್ನೆ, ಉತ್ತರಗಳನ್ನು ಧಾರೆಯೆರೆದಿದ್ದಾರೆ. ಈ ಗುಂಪಿನಲ್ಲಿದ್ದ, ಏನೂ ಗೊತ್ತಿಲ್ಲದ ಟಾಪರ್ ವಿದ್ಯಾರ್ಥಿನಿಯೊಬ್ಬಳು ಮಾರನೆ ದಿನ ತನ್ನ ಗೆಳತಿಯನ್ನು ನಿನ್ನೆ ನೀನೇಕೆ ಶಾಲೆಗೆ ಬಂದಿರಲಿಲ್ಲ ಎಂದು ಕೇಳಿದ್ದಾಳೆ. ಅದಕ್ಕೆ ನನಗೆ ಆ ಬಗ್ಗೆ ಗೊತ್ತಿಲ್ಲ. ಯಾರು ಕ್ಲಾಸ್ ನಡೆಸಿದ್ದು ಎಂದು ಕೇಳಿದ್ದಾಳೆ. ಹೀಗೇ-ನಿನ್ನೆ ಸ್ಪೆಷಲ್ ಕ್ಲಾಸ್ ಇತ್ತು. ನಾವೆಲ್ಲ ಹೋಗಿದ್ದೆವು ಎಂದು ಸಹಜವಾಗೇ ಹೇಳಿದ್ದಾಳೆ. ಕ್ಲಾಸ್‌ಗೆ ಹೋಗಿರದ ವಿದ್ಯಾರ್ಥಿನಿಗೆ ಯಾಕೋ ಅನುಮಾನ ಸುಳಿದಿದೆ.

ಈ ಅನುಮಾನ ಹೆಮ್ಮರವಾಗಿ, ಸಾರ್ವತ್ರಿಕವಾಗಿ ಕೊನೆಗೆ ಪಿಯು ಪ್ರಶ್ನೆ ಪತ್ರಿಕೆ(ಕೆಮಿಸ್ಟ್ರಿ) ಬಹಿರಂಗವಾಗಿರುವುದು ಬೆಳಕಿಗೆ ಬಂದಿದೆ. ಈಗ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳೂ ಬಹಿರಂಗಗೊಂಡಿರುವ ಸಂಶಯ ಬಲವಾಗಿದ್ದು, ತನಿಖೆ ನಡೆದಿದೆ. ಪ್ರಶ್ನೆಪತ್ರಿಕೆ ಕದ್ದ ಕಳ್ಳರಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದಾಗ ಇಂತಹ ದೇಶದ್ರೋಹದ ಕರಾಳ ಕೃತ್ಯದಲ್ಲಿ ಭಾಗಿಯಾದ ಸಂಸ್ಥೆಗಳು, ಶಾಲೆಗಳು, ಶಿಕ್ಷಕರು, ಅಧಿಕಾರಿಗಳು, ಅದರಲ್ಲೂ ಸಮಾಜವನ್ನು ರಕ್ಷಿಸಬೇಕಾದ ಆರಕ್ಷಕ ಅಧಿಕಾರಿಗಳು(ಐಪಿಎಸ್) ಎಲ್ಲರ ಬಣ್ಣ ಬಯಲಾಗಿದೆ. ಆ ಖದೀಮರು ಯಾರು ಎಂಬುದು ಬಹಿರಂಗವಾಗಿ ಪೋಷಕರು, ವಿದ್ಯಾರ್ಥಿಗಳು ಕ್ಯಾಕರಿಸಿ ಉಗಿಯುತ್ತಿದ್ದಾರೆ.

ಈ ಹೀನಾತಿಹೀನ ಕಾರ್ಯದಲ್ಲಿ ಪಾಲ್ಗೊಂಡಿರುವವರೆಲ್ಲ ಎತ್ತರದ ಧ್ವನಿಯಲ್ಲಿ ‘ಭಾರತ್ ಮಾತಾಕಿ ಜೈ’ ಎಂದು ಅಬ್ಬರಿಸುವವರೇ. ಈಗ ಹೇಳಿ ಯಾವುದು ದೇಶದ್ರೋಹ? ಪ್ರಶ್ನೆ ಪತ್ರಿಕೆ ಕದ್ದು , ಹಣ ಮಾಡಿ, ಈ ದೇಶದ ಭವಿಷ್ಯವನ್ನು ತೊಡೆದು ಹಾಕುವುದೇ? ಭಾರತ್ ಮಾತಾಕಿ ಜೈ ಎನ್ನದಿರುವುದೇ? ಪ್ರಧಾನಿಯನ್ನೋ ಮುಖ್ಯಮಂತ್ರಿಯನ್ನೋ ಟೀಕಿಸುವುದೇ…?

ಸಾವಿನ ಮನೆಗೆ ತಳ್ಳುವುದು:

ಲಕ್ಷಾಂತರ ಖರ್ಚು ಮಾಡಿ, ಸಾಲಸೋಲ ಮಾಡಿ ಮಕ್ಕಳನ್ನು ಓದಿಸುವ ಪೋಷಕರು, ತಮ್ಮ ಬಾಲ್ಯ, ಆಸೆ ಆಕಾಂಕ್ಷೆಗಳನ್ನು ಪಣಕ್ಕಿಟ್ಟು ಓದಿದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಹೆಬ್ಬಾಗಿಲು ತೆರೆಯುವ ಪರೀಕ್ಷೆ ಎಂಬ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಲು ಸರ್ವ ಸಿದ್ಧತೆ ನಡೆಸಿರುವಾಗ ಕೆಲವೇ ಕೆಲವು ಮಂದಿ ತಾವು ಹಣ ಮಾಡುವುದಕ್ಕಾಗಿ ಇಂತಹ ಹೇಯ ಕೃತ್ಯಗಳನ್ನು ಮಾಡಿ ಇಡೀ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದಾಗ ಈ ಬಡ ಪೋಷಕರು, ವಿದ್ಯಾರ್ಥಿಗಳು ಏನು ಮಾಡಬೇಕು ಹೇಳಿ… ನ್ಯಾಯಕ್ಕಾಗಿ ಹೋರಾಡಬೇಕೇ… ಇಂಥ ದರಿದ್ರ ವ್ಯವಸ್ಥೆ ಕಂಡು ರೋಸಿ ಸಾವಿನ ಕದ ತಟ್ಟಬೇಕೇ… ತಾವು ಮಾಡಿದ್ದೆಲ್ಲ ವ್ಯರ್ಥವಾದಾಗ ಮನುಷ್ಯ ಪ್ರಾಣಿ ಏನು ಮಾಡಬೇಕು… ಇದಕ್ಕೆ ಯಾರು ಉತ್ತರಿಸಬೇಕು… ಸರ್ಕಾರವೇ? ವ್ಯವಸ್ಥೆಯೇ? ಅಥವಾ ಹಣಕ್ಕಾಗಿ ಹೊಲಸು ತಿನ್ನುವ ಖಾಸಗಿ ಶಾಲೆಗಳ ಕಟುಕರೇ…?

ತಪ್ಪಿತಸ್ಥರಿಗೆ ಶಿಕ್ಷೆ ಅಂದರಾಯಿತೆ?!

ಈ ಪ್ರಶ್ನೆ ಪತ್ರಿಕೆ ಸೋರಿಕೆ ಇಂದು ನಿನ್ನೆಯದಲ್ಲ. ಇದಕ್ಕೆ ಇತಿಹಾಸವೇ ಇದೆ. ಸಿದ್ದವ್ವನಹಳಿ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಇದು ನಡೆದೇ ಇದೆ. ಆದರೆ ಆಗ ಅದಕ್ಕೆ ತಕ್ಷಣ ಪರಿಹಾರಗಳಿರುತ್ತಿತ್ತು. ವಿದ್ಯಾರ್ಥಿಗಳಿಗೆ ಮರುಜೀವ ಬರುತ್ತಿತ್ತು. ಆದರೆ ಈಗ ಹಾಗಿಲ್ಲ. ಯಾವುದೇ ಅವ್ಯವಹಾರ ನಡೆದಾಗಲೂ ಸರ್ಕಾರದ ಬಳಿ ಇರುವುದು ಒಂದೇ ಸಿದ್ಧ(ರೆಡಿಮೇಡ್) ಹೇಳಿಕೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಕಾನೂನು ತನ್ನ ಕೆಲಸ ಮಾಡಲಿದೆ ಎಂಬುದು. ಎಲ್ಲಿದೆ ಕಾನೂನು? ಯಾರಿಗಾಗಿದೆ ಶಿಕ್ಷೆ? ಸರ್ಕಾರ ಚುರುಕ್ಕಾಗಿ, ಖದೀಮರನ್ನು ಹಿಡಿದು ಜೈಲಿಗೆ ಕಳಹಿಸಿ, ಅವರ ಆಸ್ತಿ-ಪಾಸ್ತಿಗಳನ್ನು ಮಟ್ಟುಗೋಲು ಹಾಕಿಕೊಳ್ಳಬೇಕು. ಇದರಲ್ಲಿ ಭಾಗಿಯಾದ ಶಿಕ್ಷಣ ಸಂಸ್ಥೆಗಳ ಪರವಾನಗಿ, ಮಾನ್ಯತೆ ರದ್ದು ಮಾಡಿ ಬಾಗಿಲು ಮುಚ್ಚಿಸಬೇಕು. ಶಿಕ್ಷಕರು, ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಕಠಿಣ ಶಿಕ್ಷೆ ನೀಡಬೇಕು.

ಹೀಗೆ ಮಾಡಬೇಕು ನಿಜ… ಆದರೆ ಇದರಲ್ಲಿ ಪ್ರಭಾವೀ ಶ್ರೀಮಂತರು, ರಾಜಕಾರಣಿಗಳು ಇದ್ದಾರಲ್ಲ.. ಹಾಗಾಗಿ ಅದು ಅಸಾಧ್ಯ. ಕೊಳೆತು ನಾರುವ ಈ ವ್ಯವಸ್ಥೆ ಹೀಗೆ ಮುಂದುವರಿಯುತ್ತದೆ. ಬದುಕಿನ ಭದ್ರ ಬುನಾದಿಯಾದ ಶಿಕ್ಷಣ ಕ್ಷೇತ್ರವೇ ಹೊಲಸಾಗಿ ಹಾಳಾದ ಮೇಲೆ ದೇಶಕ್ಕೆ ಭವಿಷ್ಯವಿದೆ ಎಂಬ ನಂಬಿಕೆ ನಿಮಗಿದೆಯೇ? ದುಬಾರಿ ಅನ್ಯಾಯ, ವ್ಯರ್ಥ: ಸ್ವಾರ್ಥಿಗಳು, ದೇಶದ್ರೋಹಿಗಳ ಬಂಧ ಕೃತ್ಯಗಳು ಆಡಳಿತಕ್ಕೆ , ಪೋಷಕರಿಗೆ ದುಬಾರಿ. ಏಕೆಂದರೆ ಅನಗತ್ಯ ವೆಚ್ಚಕ್ಕೆ ದಾರಿ, ಭದ್ರತೆ, ಮರು ಪರೀಕ್ಷೆಗಳಿಗೆಂದು ಸಾರ್ವಜನಿಕರ ತೆರಿಗೆ ಹಣ ಹಾಳಾಗುತ್ತದೆ.

ಇನ್ನು ಪೋಷಕರಿಗೆ ಅನ್ಯಾಯ, ಏಕೆಂದರೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗುವ ನ್ಯಾಯವಾದ ವೆಚ್ಚವನ್ನೇ ಭರಿಸಲಾಗದ ಪೋಷಕರು ಮತ್ತೆ ದುಪ್ಪಟ್ಟು ವೆಚ್ಚ ಮಾಡಲು ಸಾಧ್ಯವೇ? ವಿದ್ಯಾರ್ಥಿಗಳಿಗಂತೂ ಸಮಯ, ಶ್ರಮ ಎಲ್ಲವೂ ವ್ಯರ್ಥ. ನಿರುತ್ಸಾಹ ಉಂಟಾಗುತ್ತದೆ. ಆತ್ಮಸ್ಥೈರ್ಯ ಕುಸಿಯುತ್ತದೆ. ಈ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಇಷ್ಟೆಲ್ಲ ಕಹಿ ಸತ್ಯ ಅಡಗಿದೆ. ಸಾರ್ವಜನಿಕರು ಈ ಭ್ರಷ್ಟ ವ್ಯವಸ್ಥೆ ವಿರುದ್ದ ಸಿಡಿದೆದ್ದು , ದಂಗೆ ಏಳುವ ಮೊದಲು ಆಡಳಿತ ಸದ್ಯದ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಇದು ಸರ್ಕಾರದ ಆದ್ಯಕರ್ತವ್ಯ. ಅನ್ಯಾಯ ಸರಿಪಡಿಸುವಾಗ ಅದರಲ್ಲಿ ರಾಜಕಾರಣ ಬೇರೆಯಬಾರದು.

Write A Comment