ಅಂತರಾಷ್ಟ್ರೀಯ

ಭಾರತದೊಂದಿಗಿನ ಶಾಂತಿ ಮಾತುಕತೆ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದ ಅಬ್ದುಲ್‌ ಬಸಿತ್‌

Pinterest LinkedIn Tumblr

Abdul Basit

ನವದೆಹಲಿ : ಸದ್ಯ ಭಾರತದೊಂದಿಗಿನ ಶಾಂತಿ ಮಾತುಕತೆ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌ ಬಸಿತ್‌ ಹೇಳಿದ್ದಾರೆ.

ನವದೆಹಲಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸಿತ್‌, “ನನಗೆ ತಿಳಿದಿರುವ ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಸದ್ಯ ಉಭಯ ದೇಶಗಳ ವಿದೇಶ ಕಾರ್ಯದರ್ಶಿಗಳ ಮಟ್ಟದ ಯಾವುದೇ ಸಭೆ ನಿಗದಿಯಾಗಿಲ್ಲ’ ಎಂದಿದ್ದಾರೆ.

ಪಠಾಣ್‌ಕೋಟ್‌ ದಾಳಿಯ ಬಳಿಕ ಉಭಯ ರಾಷ್ಟ್ರಗಳ ನಡುವೆ ಯಾವುದೇ ಮಾತುಕತೆಗಳು ನಡೆಯದ ಬಗ್ಗೆ ಹಾಗೂ ಹೊಸದಾಗಿ ಯಾವುದೇ ಸಭೆಗಳು ನಿಗದಿಯಾಗದ ಬಗ್ಗೆ ಬಸಿತ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಅದೇ ವೇಳೆ ಭಾರತದ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಪಾಕಿಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆಯನ್ನು ಕೂಡಾ ಬಸಿತ್ ಅಲ್ಲಗಳೆದಿದ್ದಾರೆ.

ಪಾಕಿಸ್ಥಾನದಲ್ಲಿ ಅಸ್ಥಿರತೆ ಮತ್ತು ಅರಾಜಕತೆಯನ್ನು ಸೃಷ್ಟಿಸುವ ವಿದೇಶೀ ಶಕ್ತಿಗಳು ಎಂದೂ ತಮ್ಮ ಯತ್ನದಲ್ಲಿ ಸಫ‌ಲವಾಗುವುದಿಲ್ಲ ಮತ್ತು ಪಾಕ್‌ ಸಾರ್ವಭೌಮತೆಯನ್ನು ನಾಶಪಡಿಸುವ ಅವುಗಳ ಯತ್ನ ಫ‌ಲಿಸುವುದಿಲ್ಲ ಎಂದು ಪುನರುಚ್ಚರಿಸಿದ ಅವರು ಪಾಕಿಸ್ಥಾನದಲ್ಲಿ ಈಚೆಗೆ “ರಾ ಏಜಂಟ್‌’ ಎನ್ನಲಾದ ಕುಲಭೂಷಣ್‌ ಯಾದವ್‌ ಅವರ ಬಂಧನದಿಂದ ಪಾಕ್‌ ಈ ವರೆಗೂ ಹೇಳಿಕೊಂಡು ಬಂದಿರುವ ಸಂಗತಿಗಳು ಸಾಬೀತಾಗಿವೆ ಎಂದು ಹೇಳಿದರು.

ಈ ವರ್ಷ ನವೆಂಬರ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ಸಾರ್ಕ್‌ ಶೃಂಗ ನಡೆಯಲಿದ್ದು ಅದು ಕೂಟದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಹೊಸ ಶಕ್ತಿ ತುಂಬಲಿದೆ ಎಂದು ಬಸಿತ್ ಅಭಿಪ್ರಾಯ ಪಟ್ಟಿದ್ದಾರೆ.

Write A Comment