ಮನೋರಂಜನೆ

ಕುತೂಹಲ ಮೂಡಿಸಿದ ಭಾರತ–ಪಾಕ್‌ ನಡುವೆ ಪ್ರತಿಷ್ಠೆಯ ಪಂದ್ಯ; ಇಂದು ಯಾರೇ ಗೆದ್ದರೂ ದಾಖಲೆ

Pinterest LinkedIn Tumblr

ind-pak

ಕೋಲ್ಕತ್ತ: ಟೂರ್ನಿಯ ಆರಂಭದ ದಿನದಿಂದಲೂ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಐಸಿಸಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯ ಶನಿವಾರ ನಡೆಯಲಿದೆ.

ಪ್ರತಿಷ್ಠೆ ಎನಿಸಿರುವ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹೋರಾಟಕ್ಕೆ ‘ಸಿಟಿ ಆಫ್‌ ಜಾಯ್‌’ ಎಂದೇ ಖ್ಯಾತಿ ಪಡೆದಿರುವ ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ವೇದಿಕೆ ಒದಗಿಸಲಿದೆ.

‘ನಮ್ಮ ದೇಶದ ಕ್ರಿಕೆಟ್‌ ಪ್ರೇಮಿಗಳಿಗಿಂತ ಭಾರತದ ಅಭಿಮಾನಿಗಳಿಂದಲೇ ಹೆಚ್ಚು ಪ್ರೀತಿ ಸಿಕ್ಕಿದೆ’ ಎಂದು ಪಾಕ್ ತಂಡದ ನಾಯಕ ಶಾಹಿದ್‌ ಅಫ್ರಿದಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಮಾತನಾಡಿ ರುವ ಸುನಿಲ್‌ ಗಾವಸ್ಕರ್‌ ‘ಭಾರತ ಎದುರಿನ ಪಂದ್ಯದಲ್ಲಿ ಪಾಕ್ ಗೆಲುವು ಪಡೆಯುವ ನೆಚ್ಚಿನ ತಂಡ’ ಎಂದಿದ್ದಾರೆ.

ಈ ಎರಡೂ ಹೇಳಿಕೆಗಳು ಕ್ರಿಕೆಟ್‌ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿವೆ. ಎಲ್ಲಕ್ಕಿಂತ ಮುಖ್ಯವಾಗಿ ಭದ್ರತಾ ಕಾರಣ ನೀಡಿ ಪಾಕ್ ತಂಡ ಟೂರ್ನಿ ಆಡಲು ಹಿಂದೇಟು ಹಾಕಿತ್ತು. ವಿಶ್ವ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಬೆದರಿಕೆಯೂ ಒಡ್ಡಿತ್ತು. ಎಲ್ಲಾ ವಿವಾದಗಳ ನಡುವೆಯೂ ಈಗ ಆಟಗಾರರು ಆಡಲು ಸಜ್ಜಾಗಿದ್ದಾರೆ. ಆದ್ದರಿಂದ ವಿಶ್ವದ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಚಿತ್ತ ಈ ಪಂದ್ಯದತ್ತ ಹರಿದಿದೆ.

ನಿಗದಿತ ವೇಳಾಪಟ್ಟಿಯಂತೆ ಪಂದ್ಯ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಹಿಮಾಚಲ ಪ್ರದೇಶ ಸರ್ಕಾರ ಪಂದ್ಯ ನಡೆಯಲು ಅವಕಾಶ ನೀಡುವುದಿಲ್ಲ ಎಂದು ತಗಾದೆ ತೆಗೆದಿತ್ತು. ಆದ್ದರಿಂದ ಪಾಕ್‌ ಸರ್ಕಾರ ಕೂಡ ಆತಂಕ ವ್ಯಕ್ತಪಡಿಸಿದ್ದರಿಂದ ಪಂದ್ಯ ವನ್ನು ಕೋಲ್ಕತ್ತಕ್ಕೆ ಸ್ಥಳಾಂತರಿಸಲಾಗಿತ್ತು.

ಜಯ ಅನಿವಾರ್ಯ: 2007ರ ಟೂರ್ನಿಯ ಚಾಂಪಿಯನ್ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಭಾರತ ತಂಡ ಈ ಬಾರಿ ನಾಕೌಟ್‌ ಪ್ರವೇಶದ ಕನಸು ಉಳಿಸಿಕೊಳ್ಳಬೇಕಾದರೆ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಬ್ಯಾಟಿಂಗ್‌ ವೈಫಲ್ಯ ಕಂಡು ನ್ಯೂಜಿಲೆಂಡ್ ಎದುರು ಸೋತಿತ್ತು. ಆದರೆ ‘ಬೂಮ್‌, ಬೂಮ್‌’ ಎಂದೇ ಹೆಸರಾಗಿರುವ ಅಫ್ರಿದಿ ನಾಯಕತ್ವದ ಪಾಕ್ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಎರಡನೇ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಆದ್ದರಿಂದ ದೋನಿ ಪಡೆಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟ ವೆನಿಸಿದೆ. ಈ ಪಂದ್ಯವನ್ನು ಬಿಟ್ಟು ಭಾರತ ಇನ್ನುಳಿದ ಹೋರಾಟಗಳಲ್ಲಿ ಬಾಂಗ್ಲಾದೇಶ, ಆಸ್ಟ್ರೇಲಿಯಾ ಎದುರು ಆಡಬೇಕಿದೆ. ಜೊತೆಗೆ ಈ ಪಂದ್ಯದಲ್ಲಿ ಯಾರೇ ಗೆದ್ದರೂ ಹೊಸ ದಾಖಲೆ ನಿರ್ಮಾಣ ವಾಗಲಿದೆ. ಏಕೆಂದರೆ ಪಾಕ್ ತಂಡ ಈಡನ್‌ನ ಗಾರ್ಡ್‌ನ್ಸ್‌ನಲ್ಲಿ ಒಮ್ಮೆಯೂ ಸೋತಿಲ್ಲ. ಭಾರತ ವಿಶ್ವ ಟೂರ್ನಿಯಲ್ಲಿ ಪಾಕ್‌ ಎದುರು ಒಮ್ಮೆಯೂ ಮಣಿದಿಲ್ಲ.

ವೈಫಲ್ಯದ ಚಿಂತೆ: ಭಾರತ ತಂಡಕ್ಕೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಚಿಂತೆ ಕಾಡುತ್ತಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡವೆನಿಸಿರುವ ದೋನಿ ಪಡೆ ಕಿವೀಸ್ ನೀಡಿದ್ದ 127 ರನ್‌ ಗುರಿ ಮುಟ್ಟಲಾಗದೇ ಪರದಾಡಿತ್ತು. ಕೇವಲ 79 ರನ್‌ಗೆ ಆಲೌಟ್‌ ಆಗಿ ಟೀಕೆಗೂ ಗುರಿಯಾಗಿತ್ತು. ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ಗಳೆನಿಸಿ ರುವ ಯುವರಾಜ್‌ ಮತ್ತು ರೈನಾ ಕ್ರಮವಾಗಿ 1ಮತ್ತು 4 ರನ್‌ ಗಳಿಸಿ ಔಟಾಗಿದ್ದರು.

ಆತಿಥೇಯ ತಂಡದ ಬೌಲಿಂಗ್ ಉತ್ತಮವಾಗಿದೆ. ಸ್ಪಿನ್ನರ್‌ ಸ್ನೇಹಿ ಪಿಚ್‌ಗಳಾದ ಕಾರಣ ನಾಯಕ ದೋನಿ ಅವರು ಹಿಂದಿನ ಪಂದ್ಯದ ಮೊದಲ ಓವರ್‌ನಲ್ಲಿ ಸ್ಪಿನ್ನರ್‌ ಆರ್‌. ಅಶ್ವಿನ್‌ ಅವರನ್ನು ಕಣಕ್ಕಿಳಿಸಿದ್ದರು. ಅನುಭವಿ ವೇಗಿ ಆಶಿಶ್‌ ನೆಹ್ರಾ, ಜಸ್‌ಪ್ರೀತ್ ಬೂಮ್ರಾ, ಕಿವೀಸ್‌ ಎದುರು ಉತ್ತಮ ಬೌಲಿಂಗ್ ಮಾಡಿದ್ದರು.

ಆದರೆ ಇದೇ ಕ್ರೀಡಾಂಗಣದಲ್ಲಿ ಬಾಂಗ್ಲಾ ಎದುರು ಪಾಕ್ ತಂಡ ರನ್‌ ಮಳೆ ಸುರಿಸಿತ್ತು. 201 ರನ್‌ ಕಲೆ ಹಾಕಿತ್ತು. ಮೊಹಮ್ಮದ್‌ ಅಮೀರ್‌, ಮೊಹಮ್ಮದ್ ಇರ್ಫಾನ್‌, ವಹಾಬ್‌ ರಿಯಾಜ್‌, ಅಫ್ರಿದಿ ಅವರನ್ನು ಒಳಗೊಂಡಿರುವ ಪಾಕ್ ತಂಡ ಬೌಲಿಂಗ್‌ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಆದ್ದರಿಂದ ಏಷ್ಯಾದ ಬಲಿಷ್ಠ ತಂಡಗಳ ನಡುವಣ ಹೋರಾಟ ಅಭಿಮಾನಿಗಳಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಭಾರತ ತಂಡದ ಶಕ್ತಿ

*ಈ ಮಾದರಿಯ ಪರಿಣತ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿ ಹೆಚ್ಚಿದ್ದಾರೆ.
*ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ದೋನಿ ಪ್ರಮುಖ ಶಕ್ತಿ.
*ಭಾರತಕ್ಕೆ ತವರಿನ ಪಿಚ್‌ಗಳ ಮರ್ಮ ಚೆನ್ನಾಗಿ ಗೊತ್ತಿದೆ.

ದೌರ್ಬಲ್ಯ

*ಸಮರ್ಥ ಬ್ಯಾಟ್ಸ್‌ಮನ್‌ಗಳಿದ್ದರೂ ಅಗತ್ಯ ಸಮಯದಲ್ಲಿ ಆಡುವುದಿಲ್ಲ.
*ಯುವರಾಜ್‌ ಸಿಂಗ್‌ ಹಾಗೂ ಸುರೇಶ್‌ ರೈನಾ ವೈಫಲ್ಯ
*ಅನುಭವಿ ವೇಗದ ಬೌಲರ್‌ಗಳ ಕೊರತೆ

ಏಕೈಕ ಟೈ ನೆನೆಯುತ್ತಾ…

ವಿಶ್ವ ಚುಟುಕು ಟೂರ್ನಿಯ ಇತಿಹಾಸದಲ್ಲಿ ಇದುವರೆಗೂ ಒಂದು ಪಂದ್ಯವಷ್ಟೇ ಟೈ ಆಗಿದೆ. ಅದು 2007ರ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ. ಡರ್ಬನ್‌ನ ಕಿಂಗ್ಸ್‌ಮೇಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 141 ರನ್‌ ಗಳಿಸಿತ್ತು. ಪಾಕ್ ತಂಡ ನಿಗದಿತ ಓವರ್‌ಗಳು ಮುಗಿದಾಗ ಇಷ್ಟೇ ರನ್‌ಗಳನ್ನು ಕಲೆ ಹಾಕಿತ್ತು. ಆದ್ದರಿಂದ ಫಲಿತಾಂಶ ನಿರ್ಧರಿಸಲು ‘ಬೌಲ್‌ ಔಟ್‌’ ಮೊರೆ ಹೋಗಲಾಗಿತ್ತು. ಈ ವೇಳೆ ಭಾರತ ಜಯ ಸಾಧಿಸಿತ್ತು.

ಮೊದಲ ಮುಖಾಮುಖಿ

ಉಭಯ ತಂಡಗಳು ಅಂತರರಾಷ್ಟ್ರೀಯ ಟ್ವೆಂಟಿ–20 ಮಾದರಿಯಲ್ಲಿ ಇಲ್ಲಿನ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿರುವುದು ಮೊದಲ ಬಾರಿ.
ಭಾರತ ತಂಡ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಎದುರು ಇಲ್ಲಿ ಎರಡು ಪಂದ್ಯಗಳನ್ನಾಡಿದ್ದು ಒಂದೂ ಗೆಲುವು ಪಡೆದಿಲ್ಲ. ಮೂರು ದಿನಗಳ ಹಿಂದೆ ಬಾಂಗ್ಲಾ ಎದುರು ಆಡಿದ್ದ ಪಾಕ್ ತಂಡ 55 ರನ್‌ಗಳ ಜಯ ಸಾಧಿಸಿತ್ತು.

ಪಾಕಿಸ್ತಾನ ತಂಡದ ಶಕ್ತಿ

*ಭಾರತ ಎದುರಿನ ಬಹುತೇಕ ಪಂದ್ಯಗಳಲ್ಲಿ ಅಫ್ರಿದಿ ಉತ್ತಮ ಪ್ರದರ್ಶನ ನೀಡಿದ್ದಾರೆ
*ವೇಗದ ಬೌಲಿಂಗ್‌ನಲ್ಲಿ ತಂಡ ಬಲಿಷ್ಠವಾಗಿದೆ
*ಹಫೀಜ್‌, ಶೆಹ್ಜಾದ್ ಅವರಿರುವ ಪಾಕ್ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮ ಸಾಮರ್ಥ್ಯ ಹೊಂದಿದೆ

ದೌರ್ಬಲ್ಯ

*ಸಮರ್ಥ ಸ್ಪಿನ್ನರ್‌ಗಳ ಕೊರತೆ
*ಈ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ
*ಆಟಗಾರರಲ್ಲಿ ಒಗ್ಗಟ್ಟಿನ ಕೊರತೆ

Write A Comment