ರಾಷ್ಟ್ರೀಯ

ನೀನು ಒಳ ಉಡುಪುಗಳನ್ನು ಯಾಕೆ ತೊಳೆದಿಲ್ಲ?: ಆಫೀಸ್ ಅಸಿಸ್ಟೆಂಟ್‌ಗೆ ಮೆಮೋ ಕಳಿಸಿದ ಜಡ್ಜ್

Pinterest LinkedIn Tumblr

memo_judge

ಈರೋಡ್: ಉಪ ನ್ಯಾಯಾಧೀಶರ ಮನೆಯಲ್ಲಿ ಬಟ್ಟೆಗಳನ್ನು ಒಗೆಯಲು ನಿರಾಕರಿಸಿದ ಕಚೇರಿ ಸಹಾಯಕಿ ಮಹಿಳೆಗೆ ನ್ಯಾಯಾಧೀಶರೊಬ್ಬರು ಮೆಮೋ ಕಳುಹಿಸಿ ವಿವರಣೆ ಕೇಳಿದ್ದು ಈಗ ವಿವಾದಕ್ಕೆಡೆಯಾಗಿದೆ.

ತಮಿಳ್ನಾಡಿನಲ್ಲಿ ಆ ಘಟನೆ ನಡೆದಿದ್ದು, ಒಂದು ತಿಂಗಳ ಹಿಂದೆ ನ್ಯಾಯಾಧೀಶರು ಈ ಮಹಿಳೆಗೆ ಮೆಮೋ ಕಳುಹಿಸಿದ್ದರು.
ಉಪ ನ್ಯಾಯಾಧೀಶರ ಮನೆಯಲ್ಲಿ ಒಗೆಯಲು ನೀಡಿದ ಬಟ್ಟೆಗಳನ್ನು ನೀನು ಸರಿಯಾಗಿ ಒಗೆದಿಲ್ಲ. ಅಷ್ಟೇ ಅಲ್ಲ ಒಳಉಡುಪುಗಳನ್ನು ಒಗೆಯಲು ನಿರಾಕರಿಸಿ ಅವುಗಳನ್ನು ದೂರ ತಳ್ಳಿದ್ದೆ. ಇಷ್ಟೇ ಅಲ್ಲದೆ ನೀನು ಜಡ್ಜ್ ಮತ್ತು ಅವರ ಪತ್ನಿಯೊಂದಿಗೆ ಜಗಳವಾಡಿದ್ದೆ. ಈ ಬಗ್ಗೆ ನಿನ್ನ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದರ ಬಗ್ಗೆ ವಿವರಿಸಿ ಎಂದು ಸತ್ಯಮಂಗಲಂ ಸಬ್ ಕೋರ್ಟ್ ಕಚೇರಿ ಸಹಾಯಕಿ ಎಸ್. ವಸಂತಿ ಎಂಬವರಿಗೆ ಫೆ. 1, 2016ರಂದು ಉಪ ನ್ಯಾಯಾಧೀಶ ಸೆಲ್ವಂ ಅವರ ಮೆಮೋ ಕಳಿಸಿದ್ದರು. ಈ ಮೆಮೋಗೆ ಒಂದು ವಾರದಲ್ಲಿ ಉತ್ತರಿಸುವಂತೆ ಆದೇಶಿಸಲಾಗಿತ್ತು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ವಸಂತಿ, ಜಡ್ಜ್ ಅವರ ಪತ್ನಿಯೂ ನನ್ನೊಂದಿಗೆ ಜಗಳವಾಡಿದ್ದರು. ಮೆಮೋ ಸಿಕ್ಕಿದ ಮರುದಿನವೇ ನಾನು ಈರೋಡ್ ನಲ್ಲಿರುವ ಜಿಲ್ಲಾ ನ್ಯಾಯಾಧೀಶರ ಮನೆಗೆ ಹೋಗಿದ್ದೆ. ಆದರೆ ಅವರು ಅಲ್ಲಿರಲಿಲ್ಲ. ಈ ಮೆಮೋವನ್ನು ಅವರ ಸಹಾಯಕರಿಗೆ ತೋರಿಸಿದ್ದು, ಅವರು ನನ್ನನ್ನು ಸಮಾಧಾನ ಪಡಿಸಿದ್ದರು.

ಇದಾದ ನಂತರ ವಸಂತಿ ಅವರು ಫೆ. 4 ಕ್ಕೆ ತಾನು ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಇನ್ಮುಂದೆ ಈ ರೀತಿಯ ತಪ್ಪು ಮಾಡಲ್ಲ, ಈ ಬಾರಿ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು. ಇದನ್ನು ಆಲಿಸಿದ ನ್ಯಾಯಾಧೀಶರು ತನ್ನ ಪತ್ನಿಯ ಬಗ್ಗೆ ಏನೂ ಚಿಂತೆ ಮಾಡಬೇಡ, ನೀನು ಕೆಲಸ ಮುಂದುವರಿಸು ಎಂದು ಹೇಳಿದ್ದರು. ಇದಾದ ನಂತರ ನಾನು ಎಂದಿನಂತೆ ಕೆಲಸ ಮಾಡುತ್ತಿದ್ದು, ಆಮೇಲೆ ಅಲ್ಲಿ ಯಾವುದೇ ಜಗಳ ನಡೆದಿಲ್ಲ ಎಂದು ವಸಂತಿ ಹೇಳಿದ್ದಾರೆ.

ಈ ವಿಷಯವೆಲ್ಲವೂ ತಣ್ಣಗಾಗುವ ಹೊತ್ತಿಗೆ ಜಡ್ಜ್ ಮೆಮೋ ಕಳಿಸಿದ ವಿಷಯ ಬಹಿರಂಗವಾಗಿದೆ. ಕಚೇರಿ ಸಹಾಯಕಿಗೆ ಜಡ್ಜ್ ಕಳುಹಿಸಿದ ಮೆಮೋ ಬಹಿರಂಗವಾಗುತ್ತಿದ್ದಂತೆ ಇದು ವಿವಾದಕ್ಕೆಡೆಯಾಗಿದೆ.

ಕಚೇರಿ ಸಹಾಯಕಿಗೆ ಈ ರೀತಿ ಕಿರುಕುಳ ನೀಡಿರುವುದನ್ನು ಖಂಡಿಸಿ ನಾವು ಪ್ರತಿಭಟನೆ ಮಾಡಲಿದ್ದೇವೆ ಎಂದು ತಮಿಳ್ನಾಡು ನ್ಯಾಯಾಂಗ ನೌಕರರ ಸಂಘದ ನಾಯಕ ಹೇಳಿದ್ದಾರೆ. ಇದೇ ಸಂಘ ಈ ಸಂಬಂಧ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

Write A Comment