ರಾಷ್ಟ್ರೀಯ

ನಕಲಿ ಎನ್‌ಕೌಂಟರ್‌: ಗುಜರಾತ್‌ ಪೊಲೀಸರ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಸಮ್ಮತಿ

Pinterest LinkedIn Tumblr

scನವದೆಹಲಿ (ಪಿಟಿಐ): ಇಶ್ರಾತ್ ಜಾನ್ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾನೂನು ಕ್ರಮ ಜರುಗಿಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಗುಜರಾತ್‌ ಪೊಲೀಸರು ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಮಂಗಳವಾರ ಸಮ್ಮತಿ ಸೂಚಿಸಿದೆ.

ಗುಜರಾತ್‌ನಲ್ಲಿ 2004ರಲ್ಲಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಇಶ್ರಾತ್ ಜಾನ್, ಲಷ್ಕರ್‌–ಎ–ತಯಬಾದ ಆತ್ಮಹತ್ಯಾ ಬಾಂಬರ್‌ ಎಂದು ಪಾಕ್‌ ಮೂಲದ ಅಮೆರಿಕದ ಉಗ್ರ ಡೇವಿಡ್‌ ಹೆಡ್ಲಿ ಇತ್ತೀಚೆಗೆ ವಿಚಾರಣೆ ವೇಳೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ, ತಮ್ಮ ಮೇಲಿರುವ ನಕಲಿ ಎನ್‌ಕೌಂಟರ್‌ ಆರೋಪ ಮತ್ತು ಇತರೆ ಕಾನೂನು ಕ್ರಮಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಗುಜರಾತ್‌ ಪೊಲೀಸರು ಸುಪ್ರೀಂಗೆ ಹೊಸ ಮನವಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಟಿ.ಎಸ್‌ ಠಾಕೂರ್‌ ಮತ್ತು ಯು.ಯು ಲಲಿತ್‌ ಅವರನ್ನೊಳಗೊಂಡ ಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ.
ಇಶ್ರಾತ್‌ ಜಾನ್‌ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇವಿಡ್‌ ಹೆಡ್ಲಿ ವಿಚಾರಣೆ ವೇಳೆ ಬಹಿಂಗಪಡಿಸಿದ ಮಾಹಿತಿಗಳನ್ನು ಗುಜರಾತ್‌ ಪೊಲೀಸರ ಪರ ವಕೀಲ, ಎಂ.ಎಲ್‌ ಶರ್ಮಾ ಅವರು ಮಂಗಳವಾರ ಈ ಪೀಠದ ಎದುರು ವಿವರಿಸಿದರು ಹಾಗೂ ಈ ಮನವಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ಕೋರ್ಟ್‌ ಇದಕ್ಕೆ ಸಮ್ಮತಿ ಸೂಚಿಸಿತು.

ಆಗಿನ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರನ್ನು ಸಾಯಿಸಲು ಸಂಚು ಹೂಡಿದ್ದಾರೆಂದು ಶಂಕಿಸಿ, ಇಶ್ರಾತ್‌ ಜಾನ್ ಸೇರಿದಂತೆ ಒಟ್ಟು ನಾಲ್ವರನ್ನು ಜೂನ್ 15, 2004 ರಂದು ಅಹಮದಾಬಾದ್‌ನಲ್ಲಿ ನಡೆದ ಎನ್‌ಕೌಂಟರ್ನಲ್ಲಿ ಗುಜರಾತ್ ಪೊಲೀಸರು ಹತ್ಯೆಗೈದಿದ್ದರು.

Write A Comment