ರಾಷ್ಟ್ರೀಯ

ಅತ್ಯಾಚಾರ ಮಾಡಿದ ವಿಡಿಯೋ ಹಿಡಿದು ಬ್ಲ್ಯಾಕ್ ಮೇಲ್ ಮಾಡಿದ ಸಹಪಾಠಿಗಳು; ಯುವತಿ ಮೇಲೆ 10 ದಿನಗಳ ಕಾಲ ಅತ್ಯಾಚಾರ

Pinterest LinkedIn Tumblr

karimnagar-rape

ಕರೀಂನಗರ: 23ರ ಹರೆಯದ ಯುವತಿಯನ್ನು ಸಹಪಾಠಿಗಳೇ ಅತ್ಯಾಚಾರ ಮಾಡಿ, ಆ ಕೃತ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಬಳಿಕ ಅದರ ಆಧಾರದಲ್ಲಿ ಆಕೆಯನ್ನು ಬೆದರಿಸಿ ಬ್ಲ್ಯಾಕ್‌ ಮೇಲ್‌ ಮಾಡಿ, ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸದಿದ್ದರೆ ಮಾನ ಹರಾಜು ಮಾಡುವುದಾಗಿ ಹೇಳಿ 10 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಜಿ. ಶ್ರೀನಿವಾಸ್, ಎಂ. ಅಂಜಯ್ಯ ಹಾಗೂ ಎಂ. ರಾಕೇಶ್ ಅತ್ಯಾಚಾರ ಮಾಡಿರುವ ಆರೋಪಿಗಳಾಗಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸ್ ಉದ್ಯೋಗ ಪಡೆಯುವ ಆಕಾಂಕ್ಷಿಯಾಗಿದ್ದಳು. ಹೀಗಾಗಿ ಕೆಲಸ ಪಡೆಯಲು ತರಬೇತಿ ಕೇಂದ್ರಕ್ಕೆ ಹೋಗುತ್ತಿದ್ದಳು. ಈ ವೇಳೆ ಈ ಮೂವರು ಆರೋಪಿಗಳ ಪರಿಚಯವಾಗಿತ್ತು. ಅತ್ಯಾಚಾರವಾದ ದಿನದಂದು ತರಬೇತಿ ಮುಗಿಸಿಕೊಂಡು ಯುವತಿ ಹಾಗೂ ಆಕೆಯ ಮತ್ತೊಬ್ಬ ಗೆಳತಿ ಹೊರ ಬರುತ್ತಿದ್ದರು. ಈ ವೇಳೆ ಮೂವರು ಆರೋಪಿಗಳು ಯುವತಿಯರೊಂದಿಗೆ ಬಂದಿದ್ದಾರೆ.

ಯುವಕರು ಬರುತ್ತಿರುವುದರಿಂದ ಅನುಮಾನಗೊಂಡ ಯುವತಿಯ ಗೆಳತಿ ರಸ್ತೆಯ ಮಧ್ಯದಲ್ಲಿಯೇ ಪರಾರಿಯಾಗಿದ್ದಾಳೆ. ನಂತರ ಯುವತಿಯೊಬ್ಬಳು ಒಬ್ಬೊಂಟಿಯಾಗಿ ಸಿಕ್ಕಿದ್ದಾಳೆ. ಈ ವೇಳೆ ಮೂವರು ಯುವಕರು ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ, ಅತ್ಯಾಚಾರ ಮಾಡಿದ ವಿಡಿಯೋವನ್ನು ಹಿಡಿದು ಆಕೆಯನ್ನು ಬೆದರಿಸಿ 10 ದಿನಗಳ ಕಾಲ ಅತ್ಯಾಚಾರ ಮಾಡಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.

ಎರಡು ದಿನಗಳ ಹಿಂದಷ್ಟೇ ಘಟನೆ ಕುರಿತಂತೆ ಯುವತಿಯರು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು. ನಂತರ ಪ್ರಕರಣವನ್ನು ಪೋಷಕರು ಠಾಣೆಯಲ್ಲಿ ದಾಖಲಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೆಂಡಾಮಂಡಲವಾದ ಗ್ರಾಮಸ್ಥರು ಆರೋಪಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಗ್ರಾಮಸ್ಥರು ಥಳಿಸಿದ ಹಿನ್ನೆಲೆಯಲ್ಲಿ ಇದೀಗ ರಾಕೇಶ್ ಹಾಗೂ ಮತ್ತೊಬ್ಬ ಯುವಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅತ್ಯಾಚಾರವನ್ನು ವಿಡಿಯೋ ಮಾಡಿದ್ದ ಯುವಕನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಕುರಿತಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಜೋಯಿ ಅವರು, ಯುವತಿ ಮುಂದೆ ಬರದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಳ್ಳಲು ತಡವಾಯಿತು. ಪ್ರಸ್ತುತ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ ಘಟನೆ ವೀನವಂಕ ಮಂಡಲ್ ತರಬೇತಿ ಕೇಂದ್ರದಲ್ಲಿ ನಡೆದಿದೆ. ಘಟನೆ ಕುರಿತಂತೆ ಪೊಲೀಸರಿಗೆ ದೂರು ನೀಡಲು ಹೋದರೆ ಅವರು ದೂರು ದಾಖಲಿಸಿಕೊಳ್ಳಲು ತಯಾರಿರಲಿಲ್ಲ ಎಂದು ಆರೋಪಿಸಿದ್ದಾರೆ.

Write A Comment