ರಾಷ್ಟ್ರೀಯ

ಸಂಸತ್ತಿನಲ್ಲಿ ರೋಹಿತ್‌, ಜೆಎನ್‌ಯು ಕೋಲಾಹಲ; ಸ್ಮೃತಿ – ಮಾಯಾವತಿ ಸಮರ

Pinterest LinkedIn Tumblr

irani-mayawati

ನವದೆಹಲಿ: ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಪ್ರಕರಣ ರಾಜ್ಯಸಭೆಯಲ್ಲಿ ಬುಧವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಯಿತು.

ಇವರಿಬ್ಬರ ನಡುವಣ ಆರೋಪ, ಪ್ರತ್ಯಾರೋಪದಿಂದ ಸದನದಲ್ಲಿ ಯಾವುದೇ ಕಲಾಪ ನಡೆಯಲಿಲ್ಲ. ‘ಆತ್ಮಹತ್ಯೆ ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿರುವ ಸಮಿತಿಯಲ್ಲಿ ದಲಿತ ಪ್ರತಿನಿಧಿಯೇ ಇಲ್ಲ’ ಎಂದು ಮಾಯಾವತಿ ಪ್ರತಿಭಟನೆ ನಡೆಸಿದರು. ‘ಈ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಬಾರದು’ ಎಂದು ಸ್ಮೃತಿ ಹೇಳಿದ್ದು ಇಬ್ಬರ ನಡುವೆ ಕಿಡಿ ಹೊತ್ತಿಸಿತು.

‘ಸಮಿತಿಯಲ್ಲಿ ದಲಿತರನ್ನು ಹಾಕುತ್ತೀರೊ ಇಲ್ಲವೋ ಎಂದು ಒಂದು ಮಾತಿನಲ್ಲಿ ಉತ್ತರಿಸಿ’ ಎಂದು ಸ್ಮೃತಿ ಅವರನ್ನು ಮಾಯಾವತಿ ಪದೇ ಪದೇ ಕೇಳಿದರು. ಹೈದರಾಬಾದ್‌ ವಿ.ವಿ ಹಾಗೂ ಜೆಎನ್‌ಯು ಪ್ರಕರಣಗಳನ್ನು ಪ್ರತ್ಯೇಕವಾಗಿ ಚರ್ಚೆಗೆ ಎತ್ತಿಕೊಳ್ಳುವಂತೆಯೂ ಅವರು ಒತ್ತಾಯಿಸಿದರು.

ಬಿಎಸ್‌ಪಿ ಸದಸ್ಯರು ‘ರೋಹಿತ್‌ ಪ್ರಕರಣದಲ್ಲಿ ನ್ಯಾಯ ಬೇಕು’ ಎಂದು ಸಭಾಪತಿ ಪೀಠದ ಮುಂದಕ್ಕೆ ಬಂದು ಘೋಷಣೆಗಳನ್ನು ಕೂಗಿದ್ದರಿಂದ ಹಲವು ಸಲ ಕಲಾಪ ಮುಂದೂಡಲಾಯಿತು. ವಿರೋಧ ಪಕ್ಷಗಳ ಸದಸ್ಯರ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುವುದಾಗಿ ಸ್ಮೃತಿ ಹಾಗೂ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಮುಕ್ತಾರ್‌ ಅಬ್ಬಾಸ್‌ ನಕ್ವಿ ಹೇಳಿದರೂ ಮಾಯಾವತಿ ಕಿವಿಗೊಡಲಿಲ್ಲ.

‘ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸಿದ್ಧ. ಚರ್ಚೆಗೆ ಅವಕಾಶ ಮಾಡಿಕೊಡಿ. ನೀವು ನನಗಿಂತ ಹಿರಿಯರು. ನೀವು ಬಯಸುವುದಾದರೆ ಉತ್ತರಿಸುತ್ತೇನೆ’ ಎಂದು ಸ್ಮೃತಿ ಹೇಳಿದರು.

‘ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಎನ್‌ಡಿಎ ಸರ್ಕಾರವು ಆರೆಸ್ಸೆಸ್‌ನ ಒಪ್ಪಿಗೆಗೆ ಕಾಯುತ್ತಿದೆ’ ಎಂದು ಮಾಯಾವತಿ ಕೆಣಕಿದಾಗ, ‘ಈ ವಿವಾದದ ಬಗ್ಗೆ ಈಗಲೇ ಚರ್ಚಿಸಲು ಸಿದ್ಧ’ ಎಂದು ಸಚಿವೆ ಪ್ರತ್ಯುತ್ತರ ನೀಡಿದರು.

ಈ ವಿಷಯದಲ್ಲಿ ಚರ್ಚೆ ಆರಂಭಿಸುವಂತೆ ಸಿಪಿಎಂ ಸದಸ್ಯ ಸೀತಾರಾಂ ಯಚೂರಿ ಅವರನ್ನು ಉಪಸಭಾಪತಿ ಹಲವು ಬಾರಿ ಕರೆದರು. ಚರ್ಚೆ ಆರಂಭಿಸಲು ಅವರು ಸಿದ್ಧರಾಗಿದ್ದರೂ ಬಿಎಸ್‌ಪಿ ಸದಸ್ಯರು ತಮ್ಮ ಪಟ್ಟು ಸಡಿಲಿಸದೇ ಇದ್ದ ಕಾರಣ, ಸದನವನ್ನು ಅನೇಕ ಸಲ ಮುಂದೂಡಲಾಯಿತು.

ಮಾಯಾವತಿ ಮುಂದಿಟ್ಟ ಪ್ರಶ್ನೆಗಳಿಗೆ ಗುರುವಾರ ಚರ್ಚೆಯ ಬಳಿಕ ಸ್ಮೃತಿ ಇರಾನಿ ಅವರು ಉತ್ತರಿಸುವರು ಎಂದು ಉಪಸಭಾಪತಿ ಕುರಿಯನ್‌ ಮತ್ತು ನಕ್ವಿ ಭರವಸೆ ನೀಡಿದರು. ಆದರೆ ಇದರಿಂದ ತೃಪ್ತರಾಗದ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

Write A Comment