ರಾಷ್ಟ್ರೀಯ

ಹರಿಯಾಣ ಸಿಎಂಗೆ ಕೇಂದ್ರ ಬುಲಾವ್, ರೋಹ್ತಕ್ ಗ್ರಾಮಸ್ಥರಿಂದ ತರಾಟೆ

Pinterest LinkedIn Tumblr

23-jat-khattarನವದೆಹಲಿ: ಜಾಟ್ ಸಮುದಾಯದ ಮೀಸಲಾತಿ ಚಳವಳಿ ಬಗ್ಗೆ ವಿವರಗಳನ್ನು ನೀಡಲು ದೆಹಲಿಗೆ ಆಗಮಿಸುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್, ಕೃಷಿ ಸಚಿವ ಒಪಿ ಧನ್​ಕರ್ ಮತ್ತು ರಾಜ್ಯ ಹಣಕಾಸು ಸಚಿವ ಕ್ಯಾಪ್ಟನ್ ಅಭಿಮನ್ಯು ಅವರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಬುಲಾವ್ ಕಳುಹಿಸಿದ್ದಾರೆ. ಜಾಟ್ ಚಳವಳಿ ಸಂಬಂಧಿತ ಹಿಂಸಾಚಾರಗಳಿಗೆ 18 ಜನ ಬಲಿಯಾಗಿದ್ದು ಸುಮಾರು 200 ಮಂದಿ ಗಾಯಗೊಂಡಿದ್ದಾರೆ.

ಸಂಪೂರ್ಣ ಘಟನೆಗಳ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಲೋಪದೋಷ ಎಸಗಿದ ಯಾರೇ ಅಧಿಕಾರಿಯನ್ನಾದರೂ ಶಿಕ್ಷಿಸಲಾಗುವುದು. ಚಳವಳಿ ಸಂದರ್ಭದಲ್ಲಿ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಟ್ಟರ್ ಹೇಳಿದ್ದಾರೆ. ಚಳವಳಿ ಕಾಲದಲ್ಲಿ ನಡೆದದ್ದೆಲ್ಲವೂ ಷಡ್ಯಂತ್ರದ ಭಾಗ ಎಂದು ಅವರು ನುಡಿದರು.

ಈ ಮಧ್ಯೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಾಟ್ ಚಳವಳಿ ಸಂಬಂಧಿತ ವಸ್ತುಸ್ಥಿತಿ ವರದಿಯನ್ನು ಸೋಮವಾರದ ಒಳಗಾಗಿ ಸಲ್ಲಿಸುವಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ. ಮಂಗಳವಾರದ ವರದಿಗಳ ಪ್ರಕಾರ ರೋಹ್ತಕ್​ನಲ್ಲಿ ಉದ್ರಿಕ್ತ ನಿವಾಸಿಗಳು ಮುಖ್ಯಮಂತ್ರಿ ಖಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗಿದ್ದು, ರಾಜಸ್ಥಾನದ ಭರತಪುರ ರೈಲ್ವೇ ನಿಲ್ದಾಣದ ಬಳಿ ಜಾಟ್ ಪ್ರತಿಭಟನಕಾರರು ಗೂಡ್ಸ್ ರೈಲುಗಾಡಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಕಾರರು ಪಿಪ್ರಾರಾ ರೈಲು ನಿಲ್ದಾಣದ ಕಚೇರಿಗೂ ಬೆಂಕಿ ಹಚ್ಚಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜಸ್ಥಾನ ಸರ್ಕಾರವು ಎಲ್ಲಾ ಇಂಟರ್​ನೆಟ್ ಮತ್ತು ಸಾಮಾಜಿಕ ಮಾಧ್ಯಮ ಸೇವೆಗಳನ್ನು ರಾಜ್ಯದಲ್ಲಿ ನಿರ್ಬಂಧಿಸಿದೆ.

Write A Comment