ಹೊಸದಿಲ್ಲಿ: ದೇಶದ್ರೋಹ ಆರೋಪ ಎದುರಿಸುತ್ತಿರುವ ಜೆಎನ್ ಯು ವಿವಿನ ಐವರು ವಿದ್ಯಾರ್ಥಿಗಳು ಪೊಲೀಸರಿಗೆ ಶರಣಾಗುವುದಕ್ಕೆ ಮುನ್ನ ತಮಗೆ ಭದ್ರತೆ ಒದಗಿಸಬೇಕೆಂದು ಕೋರಿ ಇಂದು ದಿಲ್ಲಿ ಹೈಕೋರ್ಟ್ ಮೆಟ್ಟಲು ಹತ್ತುವ ನಿರೀಕ್ಷೆ ಇದೆ.
ಕಳೆದ ಫೆ.12ರಂದು ದೇಶದ್ರೋಹದ ಆರೋಪದ ಮೇಲೆ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಂಧಿಸಲ್ಪಟ್ಟ ಬೆನ್ನಲ್ಲೆ ಐವರು ವಿದ್ಯಾರ್ಥಿಗಳಾದ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ, ರಾಮ ನಾಗಾ, ಆಶುತೋಷ್ ಕುಮಾರ್ ಮತು ಅನಂತ ಪ್ರಕಾಶ್ ನಾಪತ್ತೆಯಾಗಿದ್ದರು. ಬಳಿಕ ಭಾನುವಾರ ರಾತ್ರಿ ಕಾಲೇಜಿನ ಆವರಣದಲ್ಲಿ ಪ್ರತ್ಯಕ್ಷರಾದರು.
ಜೆಎನ್‌ಯು ಆವರಣದೊಳಗೆ ಇರುವ ಈ ಐವರು ವಿದ್ಯಾರ್ಥಿಗಳು ತಾವು ಪೊಲೀಸರಿಗೆ ಶರಣಾಗಾವುದಿಲ್ಲ. ಬೇಕಿದ್ದರೆ ಅವರು ಬಂದು ನಮ್ಮನ್ನು ಬಂಧಿಸಲಿ ಎಂದು ಹೇಳಿದ್ದಾರೆ. ಈ ಮಧ್ಯೆ ಪೊಲೀಸರು ಈ ಐವರು ವಿದ್ಯಾರ್ಥಿಗಳಿಗೆ ಕೋರ್ಟ್ ವಿಚಾರಣೆಯನ್ನು ಎದುರಿಸುವುದಕ್ಕಾಗಿ ಶರಣಾಗಲು ಸಮಯಾವಕಾಶ ನೀಡಿದ್ದಾರೆ.
ದಿಲ್ಲಿ ಪೊಲೀಸ್ ಮುಖ್ಯಸ್ಥ ಬಿ ಎಸ್ ಬಸ್ಸಿ ಅವರು ಈ ಐವರು ವಿದ್ಯಾರ್ಥಿಗಳಿಗೆ ” ನೀವು ಏನೂ ತಪ್ಪು ಮಾಡಿಲ್ಲವೆಂದು ಸಾಬೀತುಪಡಿಸಲು ನಿಖರ ಸಾಕ್ಷ್ಯ ಒದಗಿಸಿ’ ಎಂದು ಹೇಳಿದ್ದಾರೆ.