
ವಾರಾಣಸಿ (ಪಿಟಿಐ): ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯ ನೀಡಲು ಮುಂದಾಗಿದ್ದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಯ ಕ್ಷಮೆ ಯಾಚನೆ ಮಾಡಿದ್ದಾರೆ. ಸೋಮವಾರ ಬನಾರಸ್ ಹಿಂದೂ ವಿವಿ ಶತಮಾನೋತ್ಸವ ವರ್ಷದ ಘಟಿಕೋತ್ಸವದಲ್ಲಿ ಮಾತನಾಡಿದರು.
‘ನಾನು ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸುವುದಿಲ್ಲ. ಬನಾರಸ್ ಹಿಂದೂ ವಿವಿಯಂತಹ ದೊಡ್ಡ ಸಂಸ್ಥೆಗೆ ಭೇಟಿ ನೀಡುವುದೇ ನನಗೆ ಹೆಮ್ಮೆ. ಬನಾರಸ್ ಈಗಾಗಲೇ ನನಗೆ ಸಾಕಷ್ಟು ನೀಡಿದ್ದು ಅದಕ್ಕಾಗಿ ಕೃತಜ್ಞನಾಗಿದ್ದೇನೆ’ ಎಂದು ಮೋದಿ ಹೇಳಿದರು.
ಇದೇ ಮೊದಲಲ್ಲ: ಪ್ರಧಾನಿ ಮೋದಿ ಅವರು ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿರುವುದು ಇದೇ ಮೊದಲಲ್ಲ. 2014ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದಾಗ ಲೂಸಿಯಾನ ವಿಶ್ವವಿದ್ಯಾಲಯ ಗೌರವ ಪದವಿ ನೀಡಲು ಮುಂದಾಗಿತ್ತು.
ಗುಜರಾತ್ನಲ್ಲಿ ಮೋದಿ ಅವರು ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸಬಲೀಕರಣಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು.
ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೂ ಮೋದಿ ಅವರಿಗೆ ಹಲವು ವಿವಿಗಳು ಡಾಕ್ಟರೇಟ್ ಪದವಿ ನೀಡಲು ಮುಂದೆ ಬಂದಿದ್ದವು. ಆದರೆ ಅವುಗಳನ್ನು ಅವರು ಒಪ್ಪಿಕೊಂಡಿರಲಿಲ್ಲ.