ನವದೆಹಲಿ: ಜೆಎನ್‌ಯು ವಿವಾದ ಸಂಬಂಧ ಪರ–ವಿರೋಧದ ಚರ್ಚಾ ವ್ಯಾಪ್ತಿ ದೇಶದಲ್ಲಿ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ವಿಸ್ತರಿಸುತ್ತಲೇ ನಡೆದಿದೆ.
ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಈಗಾಗಲೇ ಬೆಂಬಲ ಸೂಚಿಸಿರುವ ಯೇಲ್, ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ತಜ್ಞರು ಇದೀಗ ಮತ್ತೊಂದು ಹೆಜ್ಜೆ ಮುಂದೆಹೋಗಿ, ಕನ್ಹಯ್ಯಾ ಅವರ ಭಾಷಣವನ್ನು ಇಂಗ್ಲಿಷ್‌ನಲ್ಲಿ ನಿರೂಪಿಸುತ್ತಿದ್ದಾರೆ. ಜತೆಗೆ ಅದನ್ನು ಆನ್‌ಲೈನ್‌ಗೆ ಅಪಲೋಡ್ ಮಾಡುತ್ತಿದ್ದಾರೆ.
ಈ ಸಂಬಂಧ ‘ಯೂನಿವರ್ಸಿಟಿ ಆಫ್ ಲಂಡನ್’ನ ಎಲೆನಾರ್ ನ್ಯೂಬಿಗಿನ್ ಅವರು ವಿಡಿಯೊ ಅಪ್‌ಲೋಡ್ ಮಾಡಿದ್ದಾರೆ.
‘ನಾನು ಎಂದಿಗೂ ಜೆಎನ್‌ಯುವಿನಲ್ಲಿ ವಿದ್ಯಾರ್ಥಿಯಾಗಿರಲಿಲ್ಲ. ಆದರೆ, ಆ ವಿಶ್ವವಿದ್ತಾಲಯದ ವಿದ್ಯಾರ್ಥಿಗಳೊಟ್ಟಿಗೆ ಸಂವಾದ ನಡೆಸಿರುವೆ. ನಾನೀಗ ಕನ್ಹಯ್ಯಾ ಅವರ ‘ದೇಶದ್ರೋಹ ಭಾಷಣ’ದ ಆಯ್ದಭಾಗಗಳನ್ನು ವಿವರಿಸುತ್ತಿರುವೆ.
‘ಜೆಎನ್‌ಯು ತೆರಿಗೆದಾರರ ದುಡ್ಡಿನಿಂದ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹೌದು. ಇದು ತೆರಿಗೆದಾರರ ದುಡ್ಡಿನಿಂದ ನಡೆಯುತ್ತಿದೆ. ಆದರೆ, ನಾನೊಂದು ಪ್ರಶ್ನೆ ಕೇಳ ಬಯಸುತ್ತೇನೆ; ವಿಶ್ವವಿದ್ಯಾಲಯಗಳು ಇರುವುದು ಯಾವುದಕ್ಕೆ? ವಿಶ್ವವಿದ್ಯಾಲಯಗಳು ಇರುವುದೇ ಸಮಾಜದ ಸಾಮೂಹಿಕ ಮನಸ್ಸಾಕ್ಷಿಯ ವಿಮರ್ಶಾತ್ಮಕ ವಿಶ್ಲೇಷಣೆಗಾಗಿ. ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಅವು ಉತ್ತೇಜಿಸಬೇಕಿದೆ. ವಿಶ್ವ ವಿದ್ಯಾಲಯಗಳು ತಮ್ಮ ಕರ್ತವ್ಯವನ್ನು ಮರೆತರೆ, ದೇಶ ಉಳಿಯಲ್ಲ. ಜನರು ದೇಶದ ಭಾಗವಾಗದೇ ಹೋದರೆ, ಅದು ಶ್ರೀಮಂತರು ತಿಂದುತೇಗುವ, ಶೋಷಣೆ ಹಾಗೂ ಲೂಟಿ ಮಾಡುವ ತಾಣವಾಗಿ ಬದಲಾಗುತ್ತದೆ’ ಎಂದು ಕನ್ಹಯ್ಯಾ ಭಾಷಣ ಕೆಲವು ಭಾಗಗಳನ್ನು ನ್ಯೂಬಿಗಿನ್ ಅವರು ವಿಡಿಯೋದಲ್ಲಿ ಹೇಳುತ್ತಾರೆ.
ಅದೇ ವಿಡಿಯೋದಲ್ಲಿ ಜಂಟಿಯಾಗಿ ಮಾತನಾಡುವ ಕ್ಯಾಲಿಫೋರ್ನಿಯಾದ ಬೆರ್ಕೆಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದದೊರಾ ಝಂಗ್ ಹಾಗೂ ದಮನ್ ಯಂಗ್, ‘ನ್ಯಾಯದ ಕುರಿತ ಆರ್‌ಎಸ್‌ಎಸ್ ವ್ಯಾಖ್ಯಾನವನ್ನು ನಾವು ಪ್ರಶ್ನಿಸುತ್ತೇವೆ. ನಿಮ್ಮ ದೃಷ್ಟಿಕೋನದ ‘ನ್ಯಾಯ’ಕ್ಕೆ ನಮ್ಮ ದೃಷ್ಟಿಕೋನದಲ್ಲಿ ಜಾಗವಿಲ್ಲ. ಪ್ರತಿ ವ್ಯಕ್ತಿಯೂ ಸಂವಿಧಾನಿಕ ಹಕ್ಕನ್ನು ಮುಕ್ತವಾಗಿ ಚಲಾಯಿಸಲು ಸಾಧ್ಯವಾದ ದಿನ ನಾವು ಸ್ವಾತಂತ್ರ್ಯ ಹಾಗೂ ನ್ಯಾಯದಲ್ಲಿ ನಾವು ನಂಬಿಕೆ ಇಡುತ್ತೇವೆ’ ಎನ್ನುತ್ತಾರೆ.
ಕನ್ಹಯ್ಯಾ ಭಾಷಣ ದೇಶದ್ರೋಹ ಎನಿಸಿದರೆ, ಅದನ್ನು ಮತ್ತೊಮ್ಮೆ ಓದಿ ಹೇಳುತ್ತಿರುವವರೆಲ್ಲರನ್ನೂ ಶಿಕ್ಷಿಸಬೇಕು ಎಂದು ಪ್ರತಿಪಾದಿಸುತ್ತಾರೆ ಯಾಲೆ ವಿ.ವಿಯ ಗ್ರೇಟಾ ಲಾಫ್ಲೆರ್.
‘ನಮನ್ನು ಕರೆಯಿರಿ. ನಮ್ಮೊಂದಿಗೆ ಚರ್ಚೆ ನಡೆಸಿ. ನಾವು ಹಿಂಸೆಯ ಪರಿಕಲ್ಪನೆಯ ಕುರಿತು ಚರ್ಚಿಸಲು ಇಚ್ಛಿಸುವೆವು. ನಾವು ಅವರ ಮತಭ್ರಾಂತ ಘೋಷಣೆಗಳ ಕುರಿತು ಪ್ರಶ್ನಿಸಿ ಬಯಸುತ್ತೇವೆ, ರಕ್ತದಿಂದ ತಿಲಕ ಇಟ್ಟುಕೊಳ್ಳುವ ಹಾಗೂ ಗುಂಡುಗಳಿಂದ ಆರತಿ ಮಾಡುವ ಘೋಷಣೆಗಳನ್ನು ಪ್ರಶ್ನಿಸಲು ಇಚ್ಛಿಸುತ್ತೇವೆ. ಯಾರ ರಕ್ತ ಹರಿಸಲು ಅವರು ಬಯಸುತ್ತಿದ್ದಾರೆ?’ ಎಂದು ಕನ್ಹಯ್ಯಾ ಅವರ ಭಾಷಣ ಉದ್ದರಿಸುತ್ತಾರೆ ಅವರು.