ಲಂಡನ್: ಶಿಕ್ಷಕರಿಗಾಗಿ ನೀಡಲಾಗುವ ಜಾಗತಿಕ ಶಿಕ್ಷಕರ ಪ್ರಶಸ್ತಿ ಅಂತಿಮ ಪಟ್ಟಿಗೆ ಮುಂಬೈನಲ್ಲಿ ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಕ್ರಾಂತಿ ಶಿಕ್ಷಣ ಸಂಸ್ಥೆಯ ಸಂಸ್ಫಾಪಕಿ ರಾಬಿನ್ ಚೌರಾಸಿಯಾ ಹೆಸರು ಸೇರ್ಪಡೆಗೊಂಡಿದೆ.
ಹತ್ತು ಲಕ್ಷ ಡಾಲರ್ ಅಂದರೆ ಸುಮಾರು ರು.6.3 ಕೋಟಿ ಮೊತ್ತದ ಜಾಗತಿಕ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯ ಅಂತಿಮ 10 ಉನ್ನತ ಶಿಕ್ಷಕರ ಪಟ್ಟಿಯಲ್ಲಿ ಮುಂಬೈನ ಕೆಂಪುದೀಪ ಪ್ರದೇಶದಲ್ಲಿ ಸೇವಾರ್ಥ ಶಾಲೆ ನಡೆಸುತ್ತಿರುವ ರಾಬಿನ್ ಚೌರಾಸಿಯಾ ಹೆಸರು ಸೇರ್ಪಡೆಗೊಂಡಿದ್ದು, ಇಂಗ್ಲೆಂಡ್, ಅಮೆರಿಕ, ನೈರೋಬಿ, ಪ್ಯಾಲೆಸ್ಟೈನ್ಸ, ಜಪಾನ್, ಫಿನ್ ಲೆಂಡ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ಶಿಕ್ಷಕರೊಂದಿಗೆ ಪೈಪೋಟಿ ನಡೆಸಲಿದ್ದಾರೆ.
ಕೇರಳ ಮೂಲದ ಬ್ರಿಟನ್ ಉದ್ಯಮಿ ಸನ್ನಿ ವರ್ಕಿ ಅವರು ಸ್ಥಾಪಿಸಿರುವ ವರ್ಕಿ ಪ್ರತಿಷ್ಠಾನ ಕಳೆದ ವರ್ಷದಿಂದ ಜಾಗತಿಕ ಶಿಕ್ಷಕರ ಪ್ರಶಸ್ತಿಯನ್ನು ನೀಡುತ್ತಿದೆ. ಮಾರ್ಚ್ 13ರಂದು ದುಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಘೋಷಣೆಯಾಗಲಿದೆ.
ರಾಬಿನ್ ಚೌರಾಸಿಯಾ ಅವರು ಕಳ್ಳಸಾಗಣೆಗೆ ಬಲಿಯಾದ ಮತ್ತು ಲೈಂಗಿಕ ಕಾರ್ಯಕರ್ತೆಯರ 12ರಿಂದ 20 ವರ್ಷದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.