ನವದೆಹಲಿ, ಫೆ.18- ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಆವರಣದಲ್ಲಿ ನಡೆದಿದೆ ಎನ್ನಲಾದ ದೇಶದ್ರೋಹ ಚಟುವಟಿಕೆಗಳ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಆದೇಶಿಸಿರುವುದು ಕೈ ಪಾಳಯದಲ್ಲಿ ಸಂಚಲನ ಮೂಡಿಸಿದೆ. ರಾಹುಲ್ ಬೆಂಬಲಕ್ಕೆ ನಿಲ್ಲಲು ಕಾಂಗ್ರೆಸ್‌ನಲ್ಲಿ ಕೆಲವು ಹಿರಿಯ ಮುಖಂಡರು ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.
ಜೆಎನ್‌ಯು ಆವರಣದಲ್ಲಿ ದೇಶದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಸಂದರ್ಭ ಅಲ್ಲಿಗೆ ಭೇಟಿ ನೀಡಿದ ರಾಹುಲ್‌ಗಾಂಧಿ ವಿದ್ಯಾರ್ಥಿಗಳಿಗೆ (ದೇಶದ್ರೋಹಿಗಳಿಗೆ) ತಮ್ಮ ಬೆಂಬಲ ಘೋಷಿಸಿದ್ದರು. ರಾಹುಲ್‌ಗಾಂಧಿ ಬೆಂಬಲ ನೀಡಿದ ವಿದ್ಯಾರ್ಥಿಗಳು ಅಸಲಿಗೆ ದೇಶದ್ರೋಹಿಗಳಾಗಿದ್ದಾರೆ. ಅವರೆಲ್ಲ ವಾಸ್ತವವಾಗಿಯೂ ದೇಶ ವಿರೋಧಿಗಳು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ತನ್ನ ಅಭಿಪ್ರಾಯಗಳನ್ನು ಅಭಿವ್ಯಕ್ತಿಗೊಳಿಸಿದ್ದಕ್ಕಾಗಿ ಆತನಿಗೆ ದೇಶವಿರೋಧಿ ಪಟ್ಟ ಕಟ್ಟಲಾಗಿದೆ ಎಂದು ರಾಹುಲ್ ಹೇಳಿದ್ದರು.
ಅಲ್ಲದೆ ರಾಹುಲ್‌ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಈ ಮಧ್ಯೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಬ್ಲಾಗ್ ಮಾಡಿ ದೇಶ ಭಕ್ತಿ, ರಾಷ್ಟ್ರಪೇಮಗಳಿಗೆ ವ್ಯಾಖ್ಯಾನ ನೀಡುವಂತೆ ರಾಹುಲ್‌ರನ್ನು ಕೇಳಿದ್ದರು.
ರಾಷ್ಟ್ರಪತಿ ಭೇಟಿ:
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಇಂದು ಘಟಾನುಘಟಿ ನಾಯಕರುಗಳ ಜತೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ದೇಶದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನ ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಪ್ರತಿಪಕ್ಷದ ನಾಯಕ ಗುಲಾಬ್‌ನಬಿ ಆಜಾದ್ ಸೇರಿದಂತೆ ಪಕ್ಷದ ಸಂಸದರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಘಟನಾವಳಿಗಳ ಬಗ್ಗೆ ವಿವರ ನೀಡಿದ್ದಾರೆ.
ಜೆಎನ್‌ಯು ಅಧ್ಯಕ್ಷ ಕನ್ಹಯ್ಯ ಕುಮಾರ್ ಮೇಲೆ ಸುಳ್ಳು ಆರೋಪ ಮಾಡಿ ಬಂಧಿಸಲಾಗಿದೆ. ಪಾಟಿಯಾಲ ನ್ಯಾಯಾಲಯದ ಆವರಣದಲ್ಲಿ ವಕೀಲರ ನಡುವೆ ನಡೆದ ಘರ್ಷಣೆ ಹಾಗೂ ಪತ್ರಕರ್ತರ ಮೇಲೆ ನಡೆದ ಹಲ್ಲೆಯಲ್ಲಿ ದೆಹಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಕೂಡಲೇ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಕೂಡ ಒತ್ತಾಯಿಸಿದ್ದಾರೆ.ಈ ಎಲ್ಲಾ ಘಟನೆಗಳಿಂದ ರಾಷ್ಟ್ರರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಸದ್ಯದಲ್ಲೇ ಸಂಸತ್ ಅಧಿವೇಶನ ಆರಂಭಗೊಳ್ಳುವ ಸಂದರ್ಭದಲ್ಲೇ ವಿದ್ಯಾರ್ಥಿ ವಲಯದಲ್ಲಿ ಜೆಎನ್‌ಯು ಘಟನೆ ಸಾಕಷ್ಟು ಕಿಚ್ಚು ಹಚ್ಚಿಸಿದೆ.