ನವದೆಹಲಿ, ಫೆ.13-ಸಂಸತ್ ಭವನದ ಮೇಲಿನ ದಾಳಿಯ ಪ್ರಮುಖ ಆರೋಪಿ ಅಫ್ಜಲ್ ಗುರುಪರ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜಿಎನ್‌ಯು)ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನು ಬಂಧಿಸಿರುವುದು ಸರಿಯಲ್ಲ ಎಂದು ಖಂಡಿಸಿರುವ ಎಡಪಕ್ಷ ಹಾಗೂ ಜೆಡಿಯು ನಾಯಕರು ಇಂದು ಕೇದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಎಡಪಕ್ಷ ನಾಯಕರಾದ ಸೀತಾರಾಮ್ ಯೆಚೂರಿ, ಡಿ.ರಾಜಾ ಸೇರಿದಂತೆ ಕೆಲವು ನಾಯಕರು ಸಚಿವರನ್ನು ಭೇಟಿಮಾಡಿ ವಿದ್ಯಾರ್ಥಿನಾಯಕ ಕನ್ನಯ್ಯಾಕುಮಾರ್ ಬಂಧನ ಸರಿಯಲ್ಲ ಎಂದು ಹೇಳಿದ್ದಾರೆ. ಅವರ ಮನವಿಗೆ ಸ್ಪಂದಿಸಿದ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಭೇಟಿಯ ಬಳಿಕ ಈ ನಾಯಕರು ಹೇಳಿದ್ದಾರೆ.
ಕಾಲೇಜಿನ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೋಷನ್ (ಎಐಎಸ್‌ಎ) ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಡುವಿನ ಘರ್ಷಣೆಯಿಂದಾಗಿ ಶುಕ್ರವಾರ ಜೆಎನ್‌ಯು ಕ್ಯಾಂಪಸ್ ಅಕ್ಷರಶಃ ರಣರಂಗವಾಗಿತ್ತು. ಈ ಘಟನೆಯಲ್ಲಿ ಅಪ್ಜಲ್‌ಗುರು ಪರ ಘೋಷಣೆ ಮೊಳಗಿಸಿದ್ದು ಯಾರು ಎಂಬ ಬಗ್ಗೆಯೇ ಈಗ ಪೊಲೀಸರಿಗೆ ಸರಿಯಾದ ಮಾಹಿತಿ ಇಲ್ಲ.
ನಾವು ಯಾವುದೇ ಘೋಷಣೆಗಳನ್ನೂ ಕೂಗಿಲ್ಲ ಎಂದು ಎಐಎಸ್‌ಎ ಹೇಳಿದೆ. ನಾವು ಕೂಗಿಲ್ಲ ಎಂದು ಎಬಿವಿಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಈಗ ಈ ಪ್ರಕರಣ ಬಿಜೆಪಿ ಹಾಗೂ ಎಡಪಕ್ಷ-ಜೆಡಿಯು ನಡುವಣ ಸಮರವಾಗಿ ರೂಪ ಪಡೆದುಕೊಂಡಿದೆ. ಪೊಲೀಸರು ಬಿಜೆಪಿ ಪರ ಕೆಲಸಮಾಡಿದಾರೆ. ಅನಗತ್ಯವಾಗಿ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯಾ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಬಿಜೆಪಿ ಮೇಲೆ ಮುಗಿಬಿದ್ದಿವೆ. ಈಗ ಸರ್ಕಾರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಬೇಕಾಗಿದೆ.