ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪತ್ನಿ ಜಶೋದಾ ಬೆನ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ದಾಖಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕೆಲ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಆರ್ ಟಿಐ ಅರ್ಜಿ ಸಲ್ಲಿಸಿದ್ದಾರೆ.
ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಪಾಸ್‌ಪೋರ್ಟ್ ಪಡೆದುಕೊಂಡಿದ್ದರು. ಈ ಪಾಸ್‌ಪೋರ್ಟ್ ಪಡೆದುಕೊಳ್ಳುವ ವೇಳೆ ಅವರು ತಮ್ಮ ವೈವಾಹಿಕ ಜೀವನದ ಕುರಿತು ಯಾವ ಮಾಹಿತಿ ನೀಡಿದ್ದರು ಎಂಬುದನ್ನು ಕೋರಿ ಜಶೋದಾಬೆನ್ ಅವರು ಆರ್‌ಟಿಐನಡಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಸೂಕ್ತ ಸಮಯದಲ್ಲಿ ಅವರಿಗೆ ಉತ್ತರಿಸಲಾಗುವುದು ಎಂದು ವಿಭಾಗೀಯ ಪಾಸ್‌ಪೋರ್ಟ್ ಕಚೇರಿ ಅಧಿಕಾರಿ ಝಡ್ ಎ ಖಾನ್ ತಿಳಿಸಿದ್ದಾರೆ.
ಈ ಹಿಂದೆಯೂ ಜಶೋದಾಬೆನ್ ಅವರು ಇದೇ ರೀತಿ ಅರ್ಜಿ ಸಲ್ಲಿಸಿದ್ದರಾದರೂ, ಮೋದಿ ಅವರನ್ನು ವಿವಾಹವಾಗಿದ್ದ ಕುರಿತ ದಾಖಲಾತಿಗಳನ್ನು ಸಲ್ಲಿಸದ ಕಾರಣಕ್ಕಾಗಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಆದರೆ ಇದಿಗ ಅವರು ಮೋದಿ ಅವರನ್ನು ವಿವಾಹವಾದ ದಾಖಲೆ ಒದಗಿಸಿದ್ದಾರೆ.