ರಾಷ್ಟ್ರೀಯ

ನಿಗೂಢವಾಗಿ ನಾಪತ್ತೆಯಾದ ಕ್ಯಾಪ್ಟನ್ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಸೇನೆ

Pinterest LinkedIn Tumblr

shikhardeepಕೋಲ್ಕತಾ: ನಿಗೂಢವಾಗಿ ನಾಪತ್ತೆಯಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ಯಾಪ್ಟನ್ ಶಿಖರ್ ದೀಪ್ ಅವರ ಪತ್ತೆಗೆ ಸಹಕಾರ ನೀಡುವಂತೆ ಭಾರತೀಯ ಸೇನೆ ಸಾರ್ವಜನಿಕರನ್ನು ಕೋರಿದೆ.

ಕ್ಯಾಪ್ಟನ್ ಶಿಖರ್ ದೀಪ್ ಅವರು ಫೆಬ್ರವರಿ 6-7ರಂದು ಬಿಹಾರದಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಇದ್ದಕ್ಕಿದಂತೆ ಕಾಣೆಯಾಗಿದ್ದಾರೆ. ಶಿಖರ್ ದೀಪ್ ಅವರನ್ನು ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ ಅವರ ಸಂಬಂಧಿಗೆ ಶಿಖರ್ ಅವರ ಲಗೇಜ್, ಫೋನ್, ವ್ಯಾಲೆಟ್ ಮಾತ್ರ ಪತ್ತೆಯಾಗಿದೆ. ವ್ಯಾಲೆಟ್​ನಲ್ಲಿದ್ದ ಹಣ ಕಳುವಾಗಿದೆ. ಈ ಸಂಬಂಧ ಶಿಖರ್ ದೀಪ್ ಅವರ ಸಂಬಂಧಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಮಧ್ಯೆ, ಶಿಖರ್ ದೀಪ್ ಅವರ ತಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಶಿಖರ್ ದೀಪ್ ನಿಗೂಢವಾಗಿ ಕಾಣೆಯಾಗಿರುವ ಪ್ರಕರಣದ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡವಿರಬಹುದು ಎಂದು ಶಂಕಿಸಿದ್ದಾರೆ.

ಇನ್ನು ರೈಲ್ವೆ ಟಿಕೆಟ್ ಕಲೆಕ್ಟರ್ ಶಿಖರ್ ದೀಪ್ ಅವರನ್ನು ಕೊನೆಯ ಬಾರಿಗೆ ಕಾನ್​ಪುರದಲ್ಲಿ ನೋಡಿದ್ದೇನೆ, ಆ ನಂತರ ಅವರನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ. ಸೇನೆ ಕಾಣೆಯಾಗಿರುವ ಶಿಖರ್ ದೀಪ್ ಅವರನ್ನು ಹುಡುಕಲು ಮಾಧ್ಯಮ ಮತ್ತು ಸಾರ್ವಜನಿಕರ ಸಹಕಾರ ಕೇಳಿದೆ.

Write A Comment