ನವದೆಹಲಿ: ಕೆಲವು ಯುವಕ-ಯುವತಿಯರಿಗೆ ಸೆಲ್ಫಿ ತೆಗೆಯುವ ಗೀಳು ಸಿಕ್ಕಾಪಟ್ಟೆ. ಯಾವುದೋ ಜಾಗದಲ್ಲಿ ಸಿಕ್ಕಸಿಕ್ಕವರ ಜೊತೆ ನಿಂತು ಸೆಲ್ಫಿ ತೆಗೆದುಕೊಂಡು ಎಡವಟ್ಟು ಮಾಡಿಕೊಳ್ಳುತ್ತಾರೆ.
ಇಲ್ಲಿ ಆಗಿದ್ದು ಕೂಡ ಅದುವೇ. 18 ವರ್ಷದ ಯುವಕನೊಬ್ಬ ಜಿಲ್ಲಾಧಿಕಾರಿ ಜೊತೆ ಸೆಲ್ಫಿ ತೆಗೆಯಲು ಹೋಗಿ ಜೈಲುಪಾಲಾಗಿ ನಂತರ ಜಾಮೀನಿನ ಮೇಲೆ ಹೊರಬಂದಿದ್ದಾನೆ.
ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಬುಲಂದ್ ಶಾಹ್ರ್ ನಲ್ಲಿ. ಅಲ್ಲಿನ ಜಿಲ್ಲಾಧಿಕಾರಿ ಬಿ. ಚಂದ್ರಕಲಾ ಜೊತೆ ಸೆಲ್ಫಿ ತೆಗೆದುಕೊಂಡ ಫರಾದ್ ಅಹ್ಮದ್ ಎಂಬುವವನ್ನು ಮೊನ್ನೆ ಸೋಮವಾರ 14ದಿನಗಳವರೆಗೆ ಜೈಲಿಗೆ ಕಳುಹಿಸಲಾಗಿತ್ತು. ಕೊನೆಗೆ ನಿನ್ನೆ ಜಾಮೀನು ಮೇಲೆ ಹೊರಬಂದಿದ್ದಾನೆ.
ನಡೆದದ್ದೇನು?: ಫರಾದ್ ಅಹ್ಮದ್ ಎಂಬ ಬಾಲಕ ಉತ್ತರ ಪ್ರದೇಶದ ಬುಲಂದ್ ಶಹ್ರ್ ಜಿಲ್ಲೆಯ ಕಮಲ್ ಪುರ್ ಗ್ರಾಮದವನು.ಅಂದು ಜಿಲ್ಲಾಧಿಕಾರಿ ಬಿ. ಚಂದ್ರಕಲಾ ಯಾವುದೋ ಸ್ಥಳೀಯ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದರು.ಆಗ ಅವರ ಹತ್ತಿರಕ್ಕೆ ಬಂದ ಫರಾದ್ ಅಹ್ಮದ್ ಸೆಲ್ಫಿ ಕ್ಲಿಕ್ಕಿಸಲು ಆರಂಭಿಸಿದ.ಫೋಟೋ ತೆಗೆಯಬೇಡ. ತೆಗೆಯುವುದಿದ್ದರೂ ಮುಂಚೆಯೇ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಚಂದ್ರಕಲಾ ಎಚ್ಚರಿಕೆ ನೀಡಿದರು. ಆದರೂ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದ ಅಹ್ಮದ್ ಸರಿಯಾದ ಫೋಟೋಕ್ಕಾಗಿ ಮತ್ತೆ ಸಹ ಸೆಲ್ಫಿ ತೆಗೆಯುತ್ತಾ ಹೋದನು. ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಪಡೆಯದೆ ಅವರ ಜೊತೆ ಸೆಲ್ಫಿ ತೆಗೆದುಕೊಂಡದ್ದಕ್ಕಾಗಿ ಜೈಲು ಸೇರಿದನು.
2008ನೇ ಬ್ಯಾಚಿನ ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯಾಗಿರುವ ಚಂದ್ರಕಲಾ 2014ರಲ್ಲಿ ರಸ್ತೆಯ ಕಳಪೆ ಕಾಮಗಾರಿಗಾಗಿ ಪಾಲಿಕೆ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ನಂತರ ಜನಪ್ರಿಯರಾದರು.