ನವದೆಹಲಿ: ಸೆಲೆಬ್ರೆಟಿಗಳೂ ಕೂಡ ದೇಶದ ಭಾಗವಾಗಿದ್ದು, ದೇಶದ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಹಕ್ಕು ಅವರಿಗೂ ಇದೆ ಎಂದು ನಟ ಇರ್ಫಾನ್ ಖಾನ್ ಅವರು ಬುಧವಾರ ಹೇಳಿದ್ದಾರೆ.
ಇದರಂತೆ ಇದೀಗ ಇರ್ಫಾನ್ ಖಾನ್ ಕೂಡ ಅಸಹಿಷ್ಣುತೆ ಚರ್ಚೆಗೆ ಕೈಜೋಡಿಸಿದ್ದು, ಬಾಯಿ ಮುಚ್ಚಿಸುವುದು ಬೆಳೆಯುತ್ತಿರುವ ಸಮಾಜದಲ್ಲಿ ಆರೋಗ್ಯಕರ ಲಕ್ಷಣವಲ್ಲ ಎಂದು ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ವಾಹಿನಿಯ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೆಲವರು ನಟರು ಕೇವಲ ನಟನೆ ಮಾಡಬೇಕೆ ವಿನಃ ಅಸಹಿಷ್ಣುತೆಯ ಬಗ್ಗೆ ಪ್ರತಿಕ್ರಿಯೆ ನೀಡಬಾರದು ಎಂದು ಹೇಳುತ್ತಾರೆ. ಇದು ನಿಜಕ್ಕೂ ದೊಡ್ಡ ತಪ್ಪು. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ವ್ಯಕ್ತಪಡಿಸುವ ಹಕ್ಕಿದೆ. ಬಾಯಿಮುಚ್ಚಿಕೊಂಡಿರು ಎಂದು ಹೇಳುವುದು ಬೆಳೆಯುತ್ತಿರುವ ಸಮಾಜದಲ್ಲಿ ಆರೋಗ್ಯಕರ ಲಕ್ಷಣವಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಸಿನಿಮಾಗಳ ಯಶಸ್ಸಿನ ಕುರಿತಂತೆ ಮಾತನಾಡಿದ ಅವರು, ನನ್ನ ಸಿನಿಮಾ ನೋಡಿ ಬೆಂಬಲಿಸಿದಕ್ಕಾಗಿ ಧನ್ಯವಾದಗಳು. ಎಲ್ಲಾ ಭಾರತೀಯ ಸಿನಿಮಾಗಳು ಜಗತ್ತಿಗೆ ತಿಳಿಯುವ ಭಾಷೆಯಲ್ಲಿ ನಿರ್ಮಿಸಲಾಗಿದೆ. ಭಾರತೀಯ ಚಿತ್ರಗಳು ಜಗತ್ತಿಗೆ ತಲುಪಬೇಕು. ಅದಕ್ಕಾಗಿ ಹೊಸ ಶೈಲಿಗಳಲ್ಲಿ ಸಿನಿಮಾಗಳು ನಿರ್ಮಾಣವಾಗಬೇಕು. ಜನರು ಯಾವಾಗಲೂ ಒಂದೇ ರೀತಿಯ ಸಿನಿಮಾವನ್ನು ನೋಡಲು ಇಚ್ಛಿಸುವುದಿಲ್ಲ. ಪ್ರತಿಯೊಂದು ಸಿನಿಮಾದಲ್ಲಿ ಬದಲಾವಣೆಯನ್ನು ಬಯಸುತ್ತಾರೆ. ಹಾಗಾಗಿಯೇ ನಾನು ಈ ಹಂತದಲ್ಲಿದ್ದೇನೆ. ಒಂದು ಬಾರಿ ಮಾಡಿದ ಪಾತ್ರವನ್ನು ನಾನು ಮತ್ತೆ ಮಾಡುವುದಿಲ್ಲ. ನನಗೆ ಅದು ಬೇಸರವೆನಿಸುತ್ತದೆ. ಪ್ರತಿಯೊಂದು ಸಿನಿಮಾದಲ್ಲೂ ಪ್ರತಿಯೊಂದು ಪಾತ್ರದಲ್ಲಿ ವಿಭಿನ್ನತೆ ಇರಬೇಕು ಎಂದು ಹೇಳಿದ್ದಾರೆ.